ಅಂಗನವಾಡಿ ಸಹಾಯಕಿಯ ಗೈರು ಹಾಜರಾತಿ ಸಕ್ರಮಗೊಳಿಸಲು ₹80 ಸಾವಿರ ಲಂಚ ಪಡೆಯುತ್ತಿದ್ದ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ವನಜಾಕ್ಷಿ ಲೋಕಾಯುಕ್ತ ಪೊಲೀಸರ ಬಲೆಗೆ ಶುಕ್ರವಾರ ಬಿದ್ದಿದ್ದಾರೆ.
ಅಂಗನವಾಡಿ ಸಹಾಯಕಿ ಜಮುನಾ ತೊಂಡಿಪೊಲ್ಲ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗೈರು ಹಾಜರಿ ಸಕ್ರಮಗೊಳಿಸಿ ವೇತನ ಬಿಡುಗಡೆ ಮಾಡಲು ಮೊದಲು ₹1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ದೂರುದಾರೆ ₹80 ಸಾವಿರ ಕೊಡಲು ಒಪ್ಪಿದ್ದರು. ಯಾದಗಿರಿ ಬಸ್ ನಿಲ್ದಾಣದ ಬಳಿ ಲಂಚ ತೆಗೆದುಕೊಳ್ಳುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.
ಯಾದಗಿರಿ ಲೋಕಾಯುಕ್ತ ಡಿವೈಎಸ್‌ಪಿ ಜೆ.ಎಚ್.ಇನಾಂದಾರ್ ನೇತೃತ್ವದಲ್ಲಿ ಪಿಐ ಸಿದ್ದರಾಯ, ಸಂಗಮೇಶ ಹಾಗೂ ಇತರ ಲೋಕಾಯುಕ್ತ ಸಿಬ್ಬಂದಿ ದಾಳಿ ಮಾಡಿದ್ದಾರೆ ಎಂದು ಯಾದಗಿರಿ ಲೋಕಾಯುಕ್ತ ಎಸ್ಪಿ ಬಿ.ಕೆ.ಉಮೇಶ ತಿಳಿಸಿದ್ದಾರೆ.
ವನಜಾಕ್ಷಿ ಅವರು ಹಲವಾರು ವರ್ಷಗಳಿಂದ ಗುರುಮಠಕಲ್ ಸಿಡಿಪಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆಲ ತಿಂಗಳ ಹಿಂದೆ ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿದ್ದರು.