ರಸ್ತೆಯ ಸೇತುವೆ ಕಂದಕಕ್ಕೆ ಹಸುವೊಂದು ಬಿದ್ದು, ಮೃತಪಟ್ಟಿರುವ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ನೀಡುವಂತೆ ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದ್ದಾರೆ.
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಮಳ್ಳಳ್ಳಿ ಗ್ರಾಮದ ಮಲ್ಲಪ್ಪ ಹಣಮಂತ ಬಳಿಚಕ್ರ ಎಂಬುವವರ ಹಸು ಮೃತಪಟ್ಟಿದ್ದು, ಗ್ರಾಮಸ್ಥರ ಸಹಾಯದಿಂದ ಹಸುವಿನ ಮೃತ ದೇಹವನ್ನು ಹೊರತೆಗೆದು ಅಂತ್ಯ ಸಂಸ್ಕಾರ ಮಾಡಿದ ಬಳಿಕ ಮಾತನಾಡಿದರು.
“ಈ ಹಿಂದೆ ಧಾರಾಕಾರವಾಗಿ ಮಳೆ ಸುರಿದ ಕಾರಣದಿದಂದ ರಸ್ತೆ ಹಾಳಾಗಿದೆ. ರಸ್ತೆಯ ಕಳಪೆ ಕಾಮಗಾರಿ ಮಾಡಿದ್ದು, ಸಮರ್ಪಕ ಸೇತುವೆ ನಿರ್ಮಿಸದ ಕಾರಣ ರಸ್ತೆಯ ಮಗ್ಗುಲಲ್ಲಿರುವ ಕಂದಕ ಬಿದ್ದು ಹಸು ಮೃತಪಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಗುರುಸುಣಿಗಿಯಿಂದ ಮಳ್ಳಳ್ಳಿಗೆ ಹೋಗುವ ಪ್ರಮುಖ ರಸ್ತೆ ಇದಾಗಿದ್ದು, ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವುದು ಇದೇ ರಸ್ತೆಯಾಗಿದೆ. ಹೀಗಾಗಿ ಇಂತಹ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಈ ರಸ್ತೆಯಲ್ಲಿ ಸುಮಾರು 5 ರಿಂದ 6ಕಡೆ ಕಂದಕಗಳು ನಿರ್ಮಾಣವಾಗಿರುವುದು ತೀರ ಆತಂಕಕಾರಿ ಸಂಗತಿಯಾಗಿದೆ” ಎಂದರು.
“ಇದೇ ರಸ್ತೆಯ ಮುಖಾಂತರ ಬಸ್ ಸೇರಿದಂತೆ ಇತರೆ ಎಲ್ಲ ವಾಹನಗಳೂ ಸಂಚರಿಸುತ್ತಿದ್ದವು. ಆದರೆ, ರಸ್ತೆ ಗುಂಡಿ ಬಿದ್ದಿರುವ ಕಾರಣ ಇತ್ತೀಚೆಗೆ ಬಸ್ ಹಾಗೂ ಬೃಹತ್ ವಾಹನಗಳ ಸಂಚಾರವೂ ಸ್ಥಗಿತಗೊಂಡಿದೆ. ಇದರಿಂದಾಗಿ ಸಣ್ಣ ಪುಟ್ಟ ವಾಹನಗಳು ಟಂಟಂಗಳು ಸಂಚರಿಸುತ್ತಿವೆ. ಈ ರಸ್ತೆಯಲ್ಲಿ ಹೊಸಬರು ಸಂಚರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ ಇಲ್ಲಿ ಇನ್ನೂ ಹೆಚ್ಚಿನ ಅನಾಹುತ ಆಗುವ ಮೊದಲೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಮೃತಪಟ್ಟ ಹಸುವಿಗೆ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನರಸಾಪುರ ಕೆರೆ ಒತ್ತುವರಿ ತೆರವುಗೊಳಿಸಿ : ಸಚಿವ ಬೋಸರಾಜು ಸೂಚನೆ
“ಇನ್ನು ಮುಂದೆ ಯಾವುದೇ ಜೀವ ಹಾನಿಯಾದರೂ ಜಿಲ್ಲಾಡಳಿತವೇ ಹೊಣೆ ಹೊರಬೇಕಾಗುತ್ತದೆ. ಇಲ್ಲವಾದಲ್ಲಿ ಪ್ರಕರಣ ದಾಖಲಿಸಲು ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಸಿದ್ದಾರೆ.
ಈ ವೇಳೆ ನಿಂಗಪ್ಪ, ಬಾಬು, ಮರೆಪ್ಪ, ಅಮ್ಮಣ್ಣ, ಸಾಬರೆಡ್ಡಿ, ತಿಪ್ಪಣ್ಣ, ಪದ್ಮಣ್ಣ, ದೇವು ಸೇರಿದಂತೆ ಗ್ರಾಮಸ್ಥರು ಇದ್ದರು.