ಸರ್ಕಾರಿ ಜಾಗದಲ್ಲಿ ಸುಮಾರು 1,310ರಷ್ಟು ಅನಧಿಕೃತ ಇ-ಖಾತೆಗಳು, ಯೋಜನಾ ಪ್ರಾಧಿಕಾರದ ಅನುಮೋದನೆ ಇಲ್ಲದೆ 45 ಎಕರೆಯಲ್ಲಿ ಇ-ಖಾತೆಗಳನ್ನು ಸೃಷ್ಠಿಸಲಾಗಿದ್ದು, ಯಾದಗಿರಿ ನಗರಸಭೆಯಿಂದ ಸರ್ಕಾರಕ್ಕೆ ಅಂದಾಜು 18 ಕೋಟಿ ರೂ. ನಷ್ಟವುಂಟಾಗಿದೆ ಎಂದು ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಮೇಶ ಉಪಾಸೆ ತಿಳಿಸಿದರು.
“ಯಾದಗಿರಿ ನಗರಸಭೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಪೌರಾಯುಕ್ತರು, ಕಂದಾಯ ನಿರೀಕ್ಷಿಕರು, ಕಂದಾಯ ಅಧಿಕಾರಿಗಳು, ಕಿರಿಯ ಎಂಜಿನಿಯರ್, ಕರ ವಸೂಲಿಗರರ ಸಹಯೋಗದಿಂದ 2019ರಿಂದ 2023ರ ವರೆಗೆ 1310 ಇ-ಖಾತೆಗಳು ಅನಧಿಕೃತವಾಗಿವೆ” ಎಂದು ಹೇಳಿದರು.
“ಎನ್‌ಎ ಆಗದಿರುವ ಭೂಮಿ, ಪ್ಲಾನಿಂಗ್ ಆಗದೇ ಇರುವ ಭೂಮಿ, ಬಿಡುಗಡೆ ಆಗದಿರುವ ಭೂಮಿ, ರೈತರು ಉಳುಮೆ ಮಾಡುವಂತಹ ಭೂಮಿಗಳನ್ನು ಅನಧಿಕೃತವಾಗಿ ಲೇಔಟ್ ಮಾಡಿದ್ದು, ನಗರಸಭೆಗೆ ಅಂದಾಜಜು 18 ಕೋಟಿ ರೂ. ನಷ್ಟವುಂಟಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಲ್ಯಾಣ ಕರ್ನಾಟಕಕ್ಕೆ ಜಾಗತಿಕ ಮಟ್ಟದಲ್ಲಿ ಮಹತ್ವ ದೊರಕಬೇಕಿದೆ: ಸಾಹಿತಿ ಮಲ್ಲಿಕಾರ್ಜುನ ಕಡಕೋಳ
“ಅನಧಿಕೃತ ಇ-ಖಾತೆ ಮಾಡಿರುವ ಅಂದಿನ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ಪ್ರಾದೇಶಿಕ ಆಯುಕ್ತರಿಗೆ ದಾಖಲೆ ಸಹಿತ ದೂರು ಸಲ್ಲಿಸಲಾಗಿದೆ. ಶೀಘ್ರದಲ್ಲೇ ಸಂಬಂಧಪಟ್ಟವರ ಮೇಲೆ ಕ್ರಮ ಜರುಗಿಸಬೇಕು” ಎಂದು ಪ್ರಕಟಣೆಗೆ ತಿಳಿಸಿದ್ದಾರೆ.
ಯಾದಗಿರಿ ಜಿಲ್ಲಾ ವಾಲೆಂಟಿಯರ್ ರಾಹುಲ್ ಕೊಲ್ಲೂರ್ ಕರ್ ಅವರ ಮಾಹಿತಿ ಆಧರಿಸಿದ ವರದಿ