ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಸಿಸಿ ಕ್ಯಾಮೆರಾಗಳು ಇದ್ದರೂ ಇಲ್ಲದಂತಾಗಿದ್ದು, ವಾಹನಗಳ ಅಡ್ಡಾದಿಡ್ಡಿ ಓಡಾಟದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಕೂಡಲೇ ಸಿಸಿ ಕ್ಯಾಮೆರಾ ದುರಸ್ಥಿಪಡಿಸಿ ಸಾರ್ವಜನಿಕರಿಗೆ ಪಾದಾಚಾರಿಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ದಸಂಸ ಸಂಘಟನೆ ಜಿಲ್ಲಾ ಸಂಚಾಲಕ ಶರಣರೆಡ್ಡಿ ಹತ್ತಿಗೂಡುರ್ ಆಗ್ರಹಸಿದರು.
ಪತ್ರಿಕೆ ಪ್ರಕಟಣೆಗೆ ತಿಳಿಸಿದ್ದು, “ಅಧಿಕಾರಿಗಳಿಗೆ ಗೊತ್ತಿದ್ದರೂ, ಕಣ್ಣಿದ್ದು ಕುರುಡರಂತೆ ಮೂಕ ಪ್ರೇಕ್ಷಕರಾಗಿದ್ದಾರೆ. ಸುಗಮ ಸಂಚಾರ ಕಲ್ಪಿಸುವತ್ತ ಜಿಲ್ಲಾಡಳಿತ, ತಾಲೂಕು ಆಡಳಿತ ಅಧಿಕಾರಿ, ಜನಪ್ರತಿನಿಧಿಗಳಿಗೆ ಒತ್ತಾಯಿಸಿದರು.
“ತಾಲೂಕಿನ ಬಸವೇಶ್ವರ ವೃತ್ತದಲ್ಲಿ ಸಿಸಿ ಕ್ಯಾಮೆರಾಗಳು ಕೆಟ್ಟು ಹೋಗಿ ಬಹಳ ವರ್ಷಗಳಾದರು ತಾಲೂಕು ಆಡಳಿತ ಅವುಗಳನ್ನು ರಿಪೇರಿ ಮಾಡಿಸುವ ಗೋಜಿಗೆ ಹೋಗಿಲ್ಲ. ಶಹಾಪುರ ತಾಲೂಕಿನ ಸುಮಾರು 180 ಹಳ್ಳಿ ಜನರು ಗ್ರಾಮೀಣ ಪ್ರದೇಶದಿಂದ ಒಂದಲ್ಲ ಒಂದು ರೀತಿ ಕೆಲಸ ಕಾರ್ಯಗಳಿಗೆ ತಾಲೂಕು ಪಟ್ಟಣಕ್ಕೆ ಹೋಗಿಬರುವುದು ಸಾಮಾನ್ಯವಾಗಿದೆ. ದಿನನಿತ್ಯ ಹಳ್ಳಿಯಿಂದ ಶಹಾಪುರ ತಾಲೂಕಿಗೆ ಸುಮಾರು ನಾಲ್ಕರಿಂದ ಐದು ಸಾವಿರ ಜನರು ಬಂದು ಹೋಗುತ್ತಿದ್ದಾರೆ” ಎಂದರು.
“ಬಸವೇಶ್ವರ ವೃತ್ತದಲ್ಲಿ ಶಹಾಪುರ ನಗರದ ಹೆಬ್ಬಾಗಿಲಾಗಿದ್ದು, ಈ ಪ್ರದೇಶದಲ್ಲಿ ನಿತ್ಯವೂ ಹೆಚ್ಚಿನ ಜನರು ಓಡಾಡುವ ಪ್ರದೇಶವಾಗಿದ್ದು, ಇಂಥ ಪ್ರದೇಶದಲ್ಲಿ ಕಾಟಾಚಾರಕ್ಕಾಗಿ ಸಿಸಿ ಕ್ಯಾಮೆರಾ ಅಳವಡಿಸಿ ಅಧಿಕಾರಿ ವರ್ಗ ಕೈತೊಳೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ಈ ವೃತ್ತದಿಂದ ಯಾದಗಿರಿ, ಹೈದರಾಬಾದ್, ರಾಯಚೂರು, ಕಲಬುರಗಿ, ಸೊಲ್ಲಾಪುರ್, ಪೂನಾ, ಬಾಂಬೆಗೆ ಹೋಗುವ ಜನರಿಗೆ ಬಸವೇಶ್ವರ ವೃತ್ತ ಕೇಂದ್ರಬಿಂದುವಾಗಿದೆ. ಇನ್ನು ಈ ರಸ್ತೆ ಮಾರ್ಗದಿಂದಲೇ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು ಸಂಚರಿಸುತ್ತಿದ್ದಾರೆ. ಆದರೆ, ಸಿಸಿ ಕ್ಯಾಮೆರಾ ರಿಪೇರಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಯಾವೊಬ್ಬ ಜನಪ್ರತಿನಿಧಿಯೂ ಅಧಿಕಾರಿಗಳಿಗೆ ತಿಳಿಸಿಲ್ಲ” ಎಂದು ಆರೋಪಿಸಿದರು.
“ವಾಹನಗಳ ಅಡ್ಡಾದಿಡ್ಡಿ ಓಡಾಟದಿಂದ ಸಾರ್ವಜನಿಕರಿಗೆ ಪಾದಾಚಾರಿಗಳಿಗೆ ಹೆಚ್ಚಿನ ಅಪಘಾತಗಳಾಗುವ ಸಾಧ್ಯತೆಯಿದೆ. ಇನ್ನು ರಾತ್ರಿ ಸಮಯದಲ್ಲಂತೂ ಮಿತಿಮೀರಿದ ವಾಹನಗಳ ಸಂಚಾರ ಹಾಗೂ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಭವಿಸುತ್ತಿವೆ. ಪೊಲೀಸ್ ಇಲಾಖೆ ಅವುಗಳನ್ನು ಹೇಗೆ ಕಂಡುಹಿಡಿಯುತ್ತದೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇನ್ನು ರಾತ್ರಿಯಲ್ಲಿ ಕಳ್ಳರು, ಪುಂಡ-ಪೋಕರಿಗಳ ಹಾವಳಿ ಹೆಚ್ಚಾಗಿದ್ದು, ಅವರಿಗೆ ಭಯವೇ ಇಲ್ಲದಂತಾಗಿದೆ. ಇದರಿಂದ ದಿನದಿಂದ ದಿನಕ್ಕೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ” ಎಂದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಅಕಾಲಿಕ ಮಳೆ; ಅಡಕೆ ಎಲೆಚುಕ್ಕಿ ರೋಗ ಉಲ್ಬಣ
“ಇಂತಹ ಅಕ್ರಮಗಳನ್ನು ಮಟ್ಟ ಹಾಕಲು ಕೂಡಲೇ ಸಿಸಿ ಕ್ಯಾಮೆರಾ ರಿಪೇರಿ ಮಾಡಿ ಕಾನೂನು ಸುವ್ಯಸ್ಥೆ ಕಾಪಾಡಬೇಕು. ಸಾರ್ವಜನಿಕರ ಹಿತಕ್ಕಾಗಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಈಗಲಾದರೂ ಕ್ರಮಕ್ಕೆ ಮುಂದಾಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ” ಎಂದು ತಿಳಿಸಿದ್ದಾರೆ.
ವರದಿ :ಶರಣರೆಡ್ಡಿ ಹತ್ತಿಗೂಡುರ್ ದಸಂಸ ಜಿಲ್ಲಾ ಸಂಚಾಲಕ, ಯಾದಗಿರಿ