ಜಿಲ್ಲೆಯ ರೈಲು ಪ್ರಯಾಣಿಕರ ಹಲವು ವರ್ಷಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಜಿಲ್ಲಾ ಘಟಕದ ಮುಖಂಡರು ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದು, ಪ್ರತಿದಿನ ಸಾವಿರಾರು ಪ್ರಯಾಣಿಕರು ರೈಲು ಸೇವೆ ಅವಲಂಬಿಸಿದ್ದಾರೆ. ಹೀಗಾಗಿ ಜಿಲ್ಲೆಯ ಮೂಲಕ ಸಂಚರಿಸುವ ಪ್ರಮುಖ ಎಕ್ಸ್ಪ್ರೆಸ್ ರೈಲುಗಳಿಗೆ ಯಾದಗಿರಿ ನಿಲ್ದಾಣದಲ್ಲಿ ಕಡ್ಡಾಯವಾಗಿ ನಿಲುಗಡೆ ಕಲ್ಪಿಸಬೇಕು ಎಂದು ದಸಂಸ ಮುಖಂಡರು ಒತ್ತಾಯಿಸಿದರು.
ಕೋವಿಡ್ಗೂ ಮುನ್ನ ಸಂಚರಿಸುತ್ತಿದ್ದ ಕಲಬುರಗಿ-ರಾಯಚೂರು ಹಾಗೂ ರಾಯಚೂರು-ಕಲಬುರಗಿ ಇಂಟರ್ಸಿಟಿ ರೈಲು ಸೇವೆಗಳನ್ನು ತಕ್ಷಣ ಪುನರಾರಂಭಿಸಬೇಕು. ಈ ಸೇವೆ ಪುನರಾರಂಭವಾದರೆ ಯಾದಗಿರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವ್ಯಾಪಾರಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದರು.
ಅಲ್ಲದೆ, ಯಾದಗಿರಿ-ಬೆಂಗಳೂರು ಹಾಗೂ ಬೆಂಗಳೂರಿ-ಯಾದಗಿರಿ ನಡುವೆ ಬೆಳಗಿನ ವೇಳೆಯಲ್ಲಿ ಹೊಸ ರೈಲು ಸೇವೆ ಆರಂಭಿಸಬೇಕು. ಪ್ರಸ್ತುತ ಬೆಳಗಿನ ಸಮಯದಲ್ಲಿ ಸೂಕ್ತ ರೈಲು ಸಂಪರ್ಕದ ಕೊರತೆಯಿಂದ ಬೆಂಗಳೂರಿಗೆ ಹಾಗೂ ಇತರೆ ನಗರಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಗಮನ ಸೆಳೆದರು.
ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಮುಖಂಡರು, ಕಾಮಗಾರಿಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗುಣಮಟ್ಟ ಖಚಿತಪಡಿಸಬೇಕು. ಕಳಪೆ ಕಾಮಗಾರಿ ಕಂಡುಬಂದರೆ ಸಂಬಂಧಿಸಿದ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಭೇಟಿ
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಘಟಕದ ನಿಂಗಣ್ಣ ಬೀರ್ನಾಳ, ಅಶೋಕ ನಾಯ್ಕಲ್, ಮಲ್ಲಿಕಾರ್ಜುನ, ಹಂಪಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.





