ಜಂತರ್ ಮಂತರ್‌ನಲ್ಲಿ ನಡೆದ ‘ಕಾಕ್‌ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕಿಗೆ ಬೆದರಿಕೆ ಹಾಕಿ, ಆಕೆಯನ್ನು ಹಾಗೂ ಕುಟುಂಬದವರನ್ನು ಪ್ರಕರಣ ಮುಂದುವರಿಸದಂತೆ ಒತ್ತಡ ಹೇರುತ್ತಿರುವ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ, ಮಗುವಿನ ಮೇಲೆ ಹಿಂಸೆ ನಡೆದಿರುವ ಆರೋಪವನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಆರೋಪಿಗಳು ಮುಕ್ತವಾಗಿ ಓಡಾಡುತ್ತಾ ಬಾಲಕಿ ಅಥವಾ ಆಕೆಯ ಕುಟುಂಬದವರ ಮೇಲೆ ಒತ್ತಡ ಹೇರುತ್ತಿದ್ದರೆ, ಅದು ಗಂಭೀರ ವಿಚಾರವಾಗಲಿದೆ ಎಂದು ಸಿಜೆಐ ಸೂರ್ಯಕಾಂತ್ ಹೇಳಿದ್ದಾರೆ.
ಬಲಪಂಥೀಯ ಇನ್‌ಫ್ಲುಯೆನ್ಸರ್ ಸ್ವತಂತ್ರ ಭಾರದ್ವಾಜ್, CJP ಪ್ರತಿಭಟನೆ ವೇಳೆ ಬಾಲಕಿಯ ತಂದೆಯ ಮೇಲೆ ಹಲ್ಲೆ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಹೇಳಿಕೊಂಡ ಬಳಿಕ ಈ ಪ್ರಕರಣ ಗಮನ ಸೆಳೆದಿತ್ತು. ಆರಂಭದಲ್ಲಿ ಭಾರದ್ವಾಜ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 115(2) ಅಡಿಯಲ್ಲಿ ಸರಳ ಗಾಯ ಉಂಟುಮಾಡಿದ ಆರೋಪ ಹಾಗೂ ಸೆಕ್ಷನ್ 126(2) ಅಡಿಯಲ್ಲಿ ಅಕ್ರಮವಾಗಿ ತಡೆದ ಆರೋಪ ಮಾತ್ರ ದಾಖಲಿಸಲಾಗಿತ್ತು.
ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದ ಅವರು, ಬಾಲಕಿಯ ತಂದೆಯ ತಲೆಬುರುಡೆ ಒಡೆದಿರುವುದಾಗಿ ಹೇಳಿಕೊಂಡಿದ್ದರು. ಪೊಲೀಸರು ತಮ್ಮನ್ನು ಕೆಲವೇ ಗಂಟೆಗಳ ಕಾಲ ವಶಕ್ಕೆ ಪಡೆದಿದ್ದರು ಎಂದೂ, ಎನ್‌ಡಿಎ ನಾಯಕರೊಂದಿಗೆ ತಮ್ಮ ಸಂಪರ್ಕವಿದೆ ಎಂದೂ ಹೇಳಿಕೊಂಡಿದ್ದರು. ಬಾಲಕಿ ಹಾಗೂ ಆಕೆಯ ತಂದೆ ಸೇರಿದಂತೆ CJP ನಾಯಕರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ ಬಳಿಕ ಭಾರದ್ವಾಜ್ ವಿರುದ್ಧ ಮತ್ತಷ್ಟು ಗಂಭೀರ ಸೆಕ್ಷನ್‌ಗಳನ್ನು ಸೇರಿಸಿ ಬಂಧಿಸಲಾಯಿತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಬಾಲಕಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ವಿಚಾರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಬಾಲಕಿ ವಿರುದ್ಧವೇ ಕೌಂಟರ್ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತೊಂದೆಡೆ, ಆಕೆಯ ಮೇಲೆ ಹಲ್ಲೆ ಹಾಗೂ ಬೆದರಿಕೆ ಹಾಕಿದ ಆರೋಪಿಗಳು ಇನ್ನೂ ಹೊರಗಡೆ ಇದ್ದಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ಸ್ಥಿತಿ, ಬಾಲಕಿಗೆ ಒದಗಿಸಿರುವ ಭದ್ರತೆ ಹಾಗೂ ಆರೋಪಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಕುರಿತು ಸ್ಥಿತಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಬೇಕು ಎಂದು ವಕೀಲರು ಮನವಿ ಮಾಡಿದರು.
“ಆರೋಪಿಗಳೊಂದಿಗೆ ಇದ್ದು, ಕ್ಯಾಮೆರಾದಲ್ಲಿ ಸೆರೆಯಾದವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಮಗುವಿನ ವಿರುದ್ಧವೇ ಎಫ್‌ಐಆರ್ ದಾಖಲಿಸಲಾಗಿದೆ. ಇದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶಕ್ಕೂ ವಿರುದ್ಧವಾಗಿದೆ” ಎಂದು ವಕೀಲರು ವಾದಿಸಿದರು.
CJP ಪ್ರತಿಭಟನಾಕಾರರ ಮೇಲಿನ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿರುವ ಉನ್ನತ ಮಟ್ಟದ ಸಮಿತಿಯ ತನಿಖೆಗೆ ಸಮಯ ಬೇಕಾಗುತ್ತದೆ ಎಂದು ವಕೀಲರು ಹೇಳಿದರು. ಆದರೆ, “ಅಷ್ಟರೊಳಗೆ ಮಗುವಿಗೆ ಏನಾದರೂ ಸಂಭವಿಸಿದರೆ, ನಂತರ ಸಮಿತಿಯ ಮೂಲಕ ಅದನ್ನು ಸರಿಪಡಿಸಲು ಸಾಧ್ಯವಿಲ್ಲ” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಬಾಲಕಿಯ ನಿವಾಸದ ಮೇಲೂ ಕಲ್ಲು ತೂರಾಟ ನಡೆದಿರುವುದಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ನೀಡಬಹುದು ಎಂದೂ ವಕೀಲರು ಹೇಳಿದರು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ : ಪೊಲೀಸ್ ಮಾರುವೇಷದಲ್ಲಿ ಗೂಂಡಾಗಳನ್ನು ಕಳಿಸಿದವರು ಯಾರು?
ಈ ವೇಳೆ ಸಿಜೆಐ ಸೂರ್ಯಕಾಂತ್, ಮಗುವಿನ ಮೇಲೆ ಹಿಂಸೆ ನಡೆದಿರುವ ಆರೋಪವನ್ನು ಲಘುವಾಗಿ ಪರಿಗಣಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಆರೋಪಿಗಳು ಬಾಲಕಿ ಅಥವಾ ಆಕೆಯ ಕುಟುಂಬದವರನ್ನು ಪ್ರಕರಣ ಮುಂದುವರಿಸದಂತೆ ಬೆದರಿಸುತ್ತಿದ್ದರೆ, ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಕರಣಕ್ಕೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸೂಕ್ತ ನಿರ್ದೇಶನ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. “ದೂರುಗಳನ್ನು ಪರಿಶೀಲಿಸುತ್ತೇವೆ. ಸಮಸ್ಯೆಗಳಿರುವ ಕಡೆ ಸ್ಪಷ್ಟತೆ ತರುತ್ತೇವೆ. ಅಗತ್ಯವಿದ್ದರೆ ಹಿಂದಿನ ನಿರ್ದೇಶನಗಳನ್ನು ಮತ್ತಷ್ಟು ಸ್ಪಷ್ಟಪಡಿಸುತ್ತೇವೆ. ನಾವು ಈ ವಿಚಾರದಲ್ಲಿ ಯಾವುದೇ ಗೊಂದಲದಲ್ಲಿಲ್ಲ. ಆದೇಶ ಹೊರಡಿಸುತ್ತೇವೆ” ಎಂದು ಸಿಜೆಐ ಸೂರ್ಯಕಾಂತ್ ಹೇಳಿದ್ದಾರೆ.





