ಶಹಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಕೊಂಗಂಡಿ ಗ್ರಾಮದ ಮಾರ್ಗವಾಗಿ ತೆರಳುವ ಬಸ್‌ಗಳನ್ನು ಸದರಿ ಗ್ರಾಮದಲ್ಲಿ ನಿಲುಗಡೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಯಾದಗಿರಿ ಜಿಲ್ಲಾ ಸಮಿತಿಯಿಂದ ಶಹಾಪುರ ಘಟಕದ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಿದರು.
“ಕೊಂಗಂಡಿ ಗ್ರಾಮದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಕೊಂಗಂಡಿ ಗ್ರಾಮದಲ್ಲಿ ನಿಲ್ಲಿಸಬೇಕು. ಶಹಾಪುರ ನಗರದ ಹೊಸ ಬಸ್ ನಿಲ್ದಾಣದಿಂದ ಪ್ರತಿಯೊಂದು ಗ್ರಾಮಗಳಿಗೆ ತೆರಳುವ ಬಸ್‌ಗಳು ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಸಂಚರಿಸಬೇಕು” ಎಂದು ಆಗ್ರಹಿಸಿದರು.
“ಅಧಿಕಾರಿಗಳು ಈ ವಿಷಯದಲ್ಲಿ ಹೆಚ್ಚಿನ ಕಾಳಜಿ ವಹಿಸಿ ಗಂಭೀರತೆಯಿಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡಬೇಕು. ವಿದ್ಯಾರ್ಥಿಗಳು ಶಾಲೆ ಕಾಲೇಜಿಗೆ ತೆರಳುವುದಕ್ಕಾಗಿ ಅನಾನುಕೂಲ ಇರುವುದರಿಂದ ಸಮಯಕ್ಕೆ ಸರಿಯಾಗಿ ತೆರಳಲಾಗುತ್ತಿಲ್ಲ. ಕೊಂಗಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕುಳಿತಿದ್ದರೂ ಕೂಡ ಯಾವುದೇ ಬಸ್ ನಿಲ್ಲದೇ ಇರುವುದರಿಂದ ವಿದ್ಯಾರ್ಥಿಗಳ ಸಮಯ ಮೀರುತ್ತಿದ್ದು, ಶಾಲೆ/ಕಾಲೇಜುಗಳಿಗೆ ತೆರಳದೆ ಮನೆಗೆ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಅನುಕೂಲಕ್ಕಾದರೂ ಬಸ್ ವ್ಯವಸ್ಥೆ ಕಲ್ಪಿಸಿ, ಈ ಮಾರ್ಗ ಮಧ್ಯೆ ಸಂಚರಿಸುವ ಬಸ್‌ಗಳು ಬೆಳಿಗ್ಗೆ 6 ರಿಂದ 12ರವರೆಗೆ ಮತ್ತು ಸಂಜೆ 4ರಿಂದ 10:30ರ ಸಮಯದವರೆಗೆ ನಿಲುಗಡೆ ಮಾಡಿದರೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ. ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಮಾಡದಿದ್ದರೆ ಡಿಸೆಂಬರ್ 29ರಂದು ಬೆಳಿಗ್ಗೆ 6ಕ್ಕೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾರ್ವಜನಿಕರೊಂದಿಗೆ ಕೊಂಗಂಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಶಹಾಪುರ ನಗರದ ಹೊಸ ಬಸ್ ನಿಲ್ದಾಣದಿಂದ ಪ್ರತಿಯೊಂದು ಗ್ರಾಮಕ್ಕೆ ಹಾಗೂ ಅಂತರ ಜಿಲ್ಲೆಗೆ ಸಂಚರಿಸುವ ಬಸ್‌ಗಳು ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಹೋದರೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ರೈತರಿಗೆ, ವೃದ್ದರಿಗೆ ಪ್ರಯಾಣ ಮಾಡಲು ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿ, ಬಸ್ ನಿಲುಗಡೆಗೆ ಕ್ರಮ ವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಅಕ್ರಮವಾಗಿ ಹೂಳಲಾದ ಎಂಡೋಸಲ್ಫಾನ್ ಪ್ರಕರಣ; ನೊಟೀಸ್ ಜಾರಿ
ಈ ಸಂದರ್ಭದಲ್ಲಿ ಶರಣರೆಡ್ಡಿ ಹತ್ತಿಗೂಡುರ್, ಶರಣಪ್ಪ ಛಲವಾದಿ, ಹನುಮಂತ ದೊಡ್ಡಮನಿ, ಕಂಡಪ್ಪ ಅಯ್ಯಳ ಬಿ, ಬಸವರಾಜ್ ಪರಸಾಪುರ್ ಸೇರಿದಂತೆ ಇತರರು ಇದ್ದರು.