ಸಮಾಜ ಕಲ್ಯಾಣ ಇಲಾಖೆಯಿಂದ ಇತ್ತೀಚೆಗೆ ಉಲ್ಲೇಖಿತ ಸುತ್ತೋಲೆಯಲ್ಲಿ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಬೇಕೆಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡಸಿದ್ದಾರೆ.
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಹಲವಾರು ವರ್ಷಗಳಿಂದ ಕನಿಷ್ಠ ವೇತನಕ್ಕೆ ಅಡುಗೆ, ಅಡಿಗೆ ಸಹಾಯಕ, ರಾತ್ರಿ ಕಾವಲುಗಾರರಾಗಿ ಹೊರಗುತ್ತಿಗೆ ಆಧಾರದ ಮೇಲೆ ಮಹತ್ವದ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ಕಾರ್ಮಿಕರಿಗೆ ಈ ಸುತ್ತೋಲೆಯ ಆದೇಶದಿಂದ ಅನ್ಯಾಯವಾಗಲಿದೆ. ಇಪಿಎಫ್ ಮತ್ತು ಇಎಸ್‌ಐ ಸೌಲಭ್ಯ ಸಮರ್ಪಕವಾಗಿ ಪಡೆಯದಿದ್ದರೂ ಕಾರ್ಮಿಕರು ಹಲವಾರು ತೊಂದರೆಗಳನ್ನು ಅನುಭವಿಸುತ್ತಾ ಇಲಾಖೆಯ ಹಾಸ್ಟೆಲ್‌ಗಳಲ್ಲಿ, ಅಡುಗೆ, ವಸತಿ ನಿಲಯ ಸ್ವಚ್ಛತೆ, ಸುರಕ್ಷತೆ ಸೇರಿದಂತೆ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪ್ರಸ್ತುತ ಪರಿಸ್ಥಿತಿ ನೋಡುವುದಾದರೆ ಕಲ್ಯಾಣ ಕರ್ನಾಟಕದಂತದ ನಮ್ಮ ಭಾಗದಲ್ಲಿ ರೊಟ್ಟಿ ಮತ್ತು ಚಪಾತಿ ತಟ್ಟುವುದು ಅತ್ಯಂತ ಕಠಿಣದ ಕೆಲಸವಾಗಿದೆ. ಒಬ್ಬ ಅಡುಗೆ ಸಿಬ್ಬಂದಿ ಒಂದು ಊಟಕ್ಕೆ ತಲಾ ಒಬ್ಬರು ಒಂದುನೂರು ರೊಟ್ಟಿ, ಚಪಾತಿಗಳನ್ನು ತಟ್ಟುತ್ತಾ ಬರುತ್ತಿದ್ದಾರೆ. ಇದರ ಜೊತೆಗೆ ಸ್ವಚ್ಛತೆ ಸೇರಿದಂತೆ ಹಲವು ಕೆಲಸಗಳು ಇವರ ಹೆಗಲ ಮೇಲೆಯೇ ಇವೆ. ಆದ್ದರಿಂದ ಕಾರ್ಮಿಕರ ಪರಿಶ್ರಮ ಪರಿಗಣಿಸಿ, ಅವರಿಗಿದ್ದ ಕೆಲಸದ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಆದೇಶ ಹೊರಡಿಸಿರುವುದು ಈ ಘಳಿಗೆಯ ಅವಶ್ಯವಾಗಿತ್ತು. ಹೀಗೆ ಮಾಡುವ ಮೂಲಕ ಸರ್ಕಾರ ಮಾದರಿ ಮಾಲೀಕನಾಗಬೇಕಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕಾರ್ಮಿಕರನ್ನು ಕಡಿತ ಮಾಡಬೇಕೆನ್ನುವ ಸರ್ಕಾರದ ಕ್ರಮ ಅತ್ಯಂತ ಕಾರ್ಮಿಕ ವಿರೋಧಿಯಾಗಿದೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಣ್ಣ ಕೈಗಾರಿಕೆಗಳು ಉದ್ಯೋಗ ಸೃಷ್ಠಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ : ಸಚಿವ ಶರಣಬಸಪ್ಪ ದರ್ಶನಾಪೂರ
“ಕಾರ್ಮಿಕರ ಸಂಖ್ಯೆ ಕಡಿಮೆ ಮಾಡಿ ಎಂದು ಹೊರಡಿಸಿರುವ ಆದೇಶವನ್ನು ಹಿಂಪಡೆದು, ಹಲವು ವರ್ಷಗಳಿಂದ ಸೇವೆ ಸಲ್ಲಿಸಿರುವ ಕಾರ್ಮಿಕರನ್ನು ಅವರವರ ಹುದ್ದೆಗಳಲ್ಲೇ ಸೇವೆಯಲ್ಲಿ ಮುಂದುವರಿಸುವಂತೆ ತುರ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ನಿಯೋಗದಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷೆ ಡಿ ಉಮಾದೇವಿ, ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಜಿ ತೆಳಿಗೇರಿಕರ್, ಉಪಾಧ್ಯಕ್ಷ ತಾಜುದ್ಧೀನ್, ಪದಾಧಿಕಾರಿಗಳಾದ ಶ್ರೀಕಾಂತ್ ಚಿಕ್ಕಮೇಟಿ, ಭೀಮಶಂಕರ್, ಜಗದೇವಿ, ಸರಿತಾ, ಮಮ್ಮಾದೇವಿ, ನಿಂಗಮ್ಮ, ಲಕ್ಷ್ಮೀ ಕಟ್ಟಿಮನಿ ಸೇರಿದಂತೆ ಇತರರು ಇದ್ದರು.