ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಅವಘಡ ನಡೆದ ಸುರಪುರ ತಾಲ್ಲೂಕಿನ ಜಾಲಿಬೆಂಚಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಸಂಜೆ ಬಿರುಗಾಳಿ ಬೀಸಿ, ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ವಿಪರೀತ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಗ್ರಾಮದ ಹಲವು ಮನೆಗಳಲ್ಲಿ ಬೆಂಕಿ ಹತ್ತಿಕೊಂಡು ರೆಫ್ರಿಜೇಟರ್, ಟಿವಿ, ಫ್ಯಾನ್, ಮನೆಯ ತಂತಿಗಳು ಸುಟ್ಟು ಹೋಗಿದ್ದವು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಭೇಟಿ ನೀಡಿ ಅವಘಡ ಸಂಭವಿಸಿದ ಮನೆಗಳಿಗೆ ಭೇಟಿ ನೀಡಿದರು. ಭಯ ಪಡುವುದು ಬೇಡ, ನಿಮ್ಮೊಂದಿಗೆ ನಾವಿದ್ದೇವೆʼ ಎಂದು ಧೈರ್ಯ ತುಂಬಿದರು.

ಜೆಸ್ಕಾಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ಹಾನಿಯಾದ ಬಗ್ಗೆ ವರದಿ ನೀಡಬೇಕು. ಆ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇನೆʼ ಎಂದರು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಹೆಚ್.ಎ.ಸರಕಾವಸ್, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸಜ್ಜನ್, ಪಿಐ ಆನಂದ ವಾಘಮೋಡೆ, ಜೆಸ್ಕಾಂ ಎಇಇ ರಫಿಕ್, ಕಂದಾಯ ನಿರೀಕ್ಷಕ ಬಸವರಾಜ ಬಿರಾದರ್ ಸೇರಿದಂತೆ ರಾಜಾ ಸಂತೋಷ ನಾಯಕ, ರಮೇಶ ದೊರೆ ಅಲ್ದಾಳ, ದತ್ತು ನಾಯಕ, ದೇವು ನಾಯಕ, ಮಹೇಶ, ದೇವು ಕುಂಬಾರ ಮತ್ತಿತರರಿದ್ದರು.