ಮಕ್ಕಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಕರೆ ನೀಡಿದರು.
ಯಾದಗಿರಿಯ ವರ್ಲ್ಡ್ ವಿಷನ್ ಇಂಡಿಯಾ ಕ್ಷೇತ್ರ ಅಭಿವೃದ್ಧಿ ಸಂಸ್ಥೆಯಿಂದ ಶಹಪುರದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
“ವರ್ಲ್ಡ್ ವಿಷನ್ ಸಂಸ್ಥೆ ಸುಮಾರು ಐದು ವರ್ಷಗಳಿಂದ ಮಕ್ಕಳಿಗಾಗಿ ಮಹಿಳೆಯರಿಗಾಗಿ ಮತ್ತು ಗ್ರಾಮ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳು ಮಾಡುತ್ತಾ ಬಂದಿದೆ, ಅವರ ಕಾರ್ಯವು ಶ್ಲಾಘನೀಯ” ಎಂದು ನುಡಿದರು.
ಯೋಜನಾಧಿಕಾರಿ ಅನಿಲ್ ತೇಜಪ್ಪ ಬಲ್ಲೂರಕರ್ ಮಾತನಾಡಿ, ಸಂಸ್ಥೆಯು ಮಕ್ಕಳ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವಂತಹ ಕಾರ್ಯಕ್ರಮಗಳನ್ನು ಬಗ್ಗೆ ವಿವರಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಸರ್ಕಾರದೊಂದಿಗೆ ಸಹಕರಿಸುತ್ತೇವೆಂದು ತಿಳಿಸಿದರು.
ವರ್ಲ್ಡ್ ವಿಷನ್ ಸಂಸ್ಥೆ ವತಿಯಿಂದ ಹೊಸಪೇಟೆ ಗ್ರಾಮದ ಸರ್ಕಾರಿ ಶಾಲೆಯ 18 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ ಮಾಡಿದರು.
ಮತ್ತು 30 ಮಂದಿ ಮಕ್ಕಳಿಗೆ ಪೌಷ್ಟಿಕ ಆಹಾರ ಧಾನ್ಯಗಳನ್ನು, ಹಾಗು ಡಿಗ್ಗಿ, ಜೆ ತಾಂಡಾ, ಎಮ್ ತಾಂಡಾ, ರಸ್ಥಾಪುರ ಅಂಗನವಾಡಿ ಕೇಂದ್ರಗಳಿಗೆ ತಲಾ 30 ಕುರ್ಚಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಮಲ್ಲಣ್ಣ ದೇಸಾಯಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು, ನಿಷತ್ ಅಂಜುಮ್ ಅಂಗನವಾಡಿ ಮೇಲ್ವಿಚಾರಕರು ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದಲ್ಲಿ ಸುಂದರ್, ರಾಬರ್ಟ್, ಮೋಹನ್, ಅಶೋಕ್, ಶಿವು, ಸಿದ್ದಮ್ಮ ಹಾಗೂ ವರ್ಲ್ಡ್ ವಿಷನ್ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು.