ಯಾದಗಿರಿ ಜಿಲ್ಲಾಡಳಿತದ ವೈಫಲ್ಯದ ವಿರುದ್ಧ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಎಚ್ಚರಿಕೆ ನೀಡಿದ್ದಾರೆ.
ಕೋಲಿ ಸಮಾಜದ ಕಚೇರಿಯಲ್ಲಿ ಗಿರಿನಾಡು ಲಘುವಾಹನ (ಕಾರು ಟ್ಯಾಕ್ಸಿ) ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ಮಾಡಿದ ಬಳಿಕ ಪತ್ರಿಕೆ ಹೇಳಿಕೆ ನೀಡಿದ ಅವರು, “ಅಕ್ಟೊಬರ್ 13 ರಂದು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ಮಾಡಲಾಗುವುದು” ಎಂದು ತಿಳಿಸಿದರು.
“ಜಿಲ್ಲೆಯಾಗಿ 13 ವರ್ಷಗಳು ಕಳೆಯುತ್ತಿದ್ದರೂ ಈ ಅವಧಿಯಲ್ಲಿ ಸಾಕಷ್ಟು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಸ್ಪಂದನೆ ಇಲ್ಲದೆ ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾಡಳಿತ ಪ್ರಜ್ಞಾಶೂನ್ಯವಾಗಿದೆ” ಎಂದು ಆರೋಪಿಸಿದರು.
“ಪದೇ ಪದೆ ಹೋರಾಟ ಮಾಡಿದ ಬಳಿಕ ಇದೀಗ ನಗರಸಭೆಯವರು ಎಚ್ಚೆತ್ತು ನಿವೇಶನ ದಾಖಲಾತಿಗಳನ್ನು ಮೂರು ತಿಂಗಳ ಹಿಂದೆ ಪರಿಶೀಲಿಸಿ ಸರ್ವೆ ಮಾಡಿ ಕಳಿಸಿಕೊಟ್ಟಿದ್ದರು. ಈ ಕೆಲಸ ಮಾಡಲು ಮೂರು ತಿಂಗಳು ಬೇಕೇ” ಎಂದು ಖಾರವಾಗಿ ಪ್ರಶ್ನಿಸಿದರು.
“ನಗರಸಭೆ ಅಧಿಕಾರಿ, ಪೌರಾಯುಕ್ತರು, ಸಹಾಯಕ ಆಯುಕ್ತರು ಸೇರಿದಂತೆ ಎಲ್ಲರೂ ಮೂರು ತಿಂಗಳ ಹಿಂದೆಯೇ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೂ ಮುಂದಿನ ಹಂತಕ್ಕೆ ಹೋಗದೇ ಇರುವುದಕ್ಕೆ ಒಬ್ಬರ ಮೇಲೆ ಒಬ್ಬರು ಹಾಕಿ ಜಾರಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದರು.
“ಲಘು ವಾಹನ (ಟ್ಯಾಕ್ಸಿ ಸ್ಟ್ಯಾಂಡ್) ನಿಲುಗಡೆಗೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮಾಡಿದ ಬೇಡಿಕೆಗೆ ಸ್ಪಂದಿಸದ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಲು ಕಪ್ಪು ಬಾವುಟ ಪ್ರದರ್ಶನ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೂಲಿಕಾರರ ಅಗತ್ಯತೆ ಈಡೇರಿಕೆಗೆ ಆಗ್ರಹ
ಈ ಸಂದರ್ಭದಲ್ಲಿ ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಇಟಗಿ, ಸಾಯಿಬಣ್ಣ ಗುತ್ತೇದಾರ, ವೀರೇಶ ನಾಯ್ಕಲ್, ಬಸು ಮನಗನಾಳ, ಕಾಡಪ್ಪ ಹೂಗಾರ, ಬೀರಪ್ಪ, ಸಿದ್ದು, ತಾಯಪ್ಪ, ಬಾಬಾ, ವೆಂಕಟರೆಡ್ಡಿ, ನಯಿಮ್, ನವೀನ್, ಬಸು, ಶುಭಾಷ್, ಅಶೋಕ್, ಸಲೀಮ್, ಶೇಕ್, ಶಿವು ಯಾದಗಿರಿ, ಜಾವಿದ್ ಬನಶಂಕರ, ಅರುಣ, ಮಹೇಶ, ರಫೀ, ಗೌಸ, ಚಂದ್ರು, ಮಹೆಬೂಬ ಸೇರಿದಂತೆ ಬಹುತೇಕರು ಇದ್ದರು.