ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಣಪೂರ ಬಸವಸಾಗರ ಜಲಾಶಯದಿಂದ ಬೇಸಿಗೆ ಬೆಳೆಗೆ ಮಾರ್ಚ್ 14 ರಿಂದ ಏಪ್ರಿಲ್ 15ರವರೆಗೆ ನಿರಂತರವಾಗಿ ಎಡದಂಡೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸಾಮೂಹಿಕ ಸಂಘಟನೆಗಳ ವೇದಿಕೆ ಆಗ್ರಹಿಸಿತು.
ಸುರಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹಣಮಂತರಾಯ ಚಂದಲಾಪೂರ ಮಾತನಾಡಿ, ʼಮಾ.14 ರಂದು ಸಲಹಾ ಸಮಿತಿಯಲ್ಲಿ ವಾರ ಬಂದಿ ಪದ್ಧತಿಯಂತೆ ಏಪ್ರಿಲ್ 6 ರವರೆಗೆ ಕಾಲುವೆಗೆ ನೀರು ಹರಿಸುತ್ತೇವೆಂದು ತಿಳಿಸಲಾಗಿದೆ. ಇದು ಆವೈಜ್ಞಾನಿಕ ಪರಿಹಾರವಾಗಿದೆ. ವಾರಬಂದಿ ಮಾಡದೆ ನಿರಂತರವಾಗಿ ಏಪ್ರಿಲ್ 15 ರವರೆಗೆ ನೀರು ಬಿಟ್ಟರೆ ಮಾತ್ರ ರೈತರಿಗೆ ಫಸಲು ಕೈ ಸೇರುತ್ತದೆ. ಈಗಾಗಲೇ ಸರ್ಕಾರಕ್ಕೆ ಎರಡ್ಮೂರು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಲಿಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಮಾರ್ಚ್ 22 ರಿಂದ 30 ರವರೆಗೆ ನೀರು ಬಂದ್ ಮಾಡಿ ಏಪ್ರಿಲ್ 6 ರವರೆಗೆ ನೀರು ಬಿಡುವುದು ತಿಳಿಸಿದ್ದಾರೆ. ಆದರೆ ಇದರಿಂದಾಗಿ ರೈತರು ಬಿತ್ತನೆ ಮಾಡಿದ ಒಂದು ಬೆಳೆ ಕೂಡಾ ಬರುವುದಿಲ್ಲ. ಬೇಸಿಗೆ ಬಿಸಿಲಿಗೆ ಬೆಳೆ ಒಣಗಿ ನಷ್ಟ ಅನುಭವಿಸುವ ಪರಿಸ್ಥಿತಿ ಬರುತ್ತದೆ. ಕೂಡಲೇ ಈ ನಿರ್ಧಾರ ಕೈಬಿಟ್ಟು ಇಂದಿನಿಂದ ವಾರಬಂದಿ ಪದ್ಧತಿಯಂತೆ ಏಪ್ರಿಲ್ 15ರ ವರೆಗೆ ಕಾಲುಗೆ ನೀರು ಹರಿಸಬೇಕುʼ ಎಂದು ಒತ್ತಾಯಿಸಿದರು.
ʼಒಂದು ವೇಳೆ ನೀರು ಬಿಡದಿದ್ದರೆ ರೈತರ ಬೆಳೆ ಸಂಪೂರ್ಣ ಹಾನಿಯಾಗುತ್ತದೆ. ಅದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಈ ನಷ್ಟದಿಂದ ಸಾಲಬಾಧೆ ತಾಳಲಾರದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಹುದು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರೈತ ಸಂಘದಿಂದ ಸಂಬಂಧಪಟ್ಟ ಕಚೇರಿಗೆ ಬೀಗ ಹಾಕಿ ನ್ಯಾಯ ಸಿಗುವವರೆಗೆ ಹೋರಾಟ ನಡೆಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತೊಗರಿ ಬೆಳೆ ಹಾನಿ, ಆರ್ಥಿಕ ಹೊರೆ; ಒಂದೇ ತಿಂಗಳಲ್ಲಿ ಆರು ಮಂದಿ ರೈತರ ಆತ್ಮಹತ್ಯೆ
ರೈತ ಸಂಘದ ಪ್ರಮುಖರಾದ ಅಯ್ಯಣ್ಣ ಹಾಲಭಾವಿ, ಮಹಾದೇವಿ ಬೇವಿನಾಳಮಠ, ಮಲ್ಲನಗೌಡ ಹಗರಟಗಿ, ಭೀಮಣ್ಣ ಲಕ್ಷ್ಮೀಪೂರ, ಬುಚ್ಚಪ್ಪ ನಾಯಕ, ಮಲ್ಲಣ್ಣ ಹುಬ್ಬಳಿ, ಸಿದ್ದಪ್ಪ ಗುಡ್ಡಕಾಯಿ, ವೆಂಕಟೇಶಗೌಡ ಕುಪಗಲ್, ನಿಂಗಣ್ಣ ಬಾಚಿಮಟ್ಟಿ, ಮಲ್ಲಣ್ಣ ಸಾಹುಕಾರ, ಜುಮ್ಮಣ್ಣ ಕೆಂಗೂರಿ ಮತ್ತಿತರರು ಇದ್ದರು.