ಸಮರ್ಪಕವಾಗಿ ರಸಗೊಬ್ಬರ ವಿತರಣೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಸಮಿತಿ ಮುಖಂಡರು ಹಾಗೂ ರೈತರು ನಗರದ ಗಾಂಧಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಕೃಷಿ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ ಮಾತನಾಡಿ, ʼರೈತರಿಗೆ ಸಮರ್ಪಕವಾಗಿ ಯೂರಿಯಾ ರಸಗೊಬ್ಬರ ದೊರೆಯುತ್ತಿಲ್ಲ. ಬೆಳಿಗ್ಗೆಯಾದರೆ ದಿನಂಪತ್ರಿ ಗಂಟೆಗಟ್ಟಲೆ ರಸಗೊಬ್ಬರ ಮಳಿಗೆ ಮುಂದೆ ನಿಂತು ವರ್ತಕರು ಕೊಟ್ಟಷ್ಟು ತೆಗೆದುಕೊಂಡು ಹೋಗುವ ದುಸ್ಥಿತಿ ನಿರ್ಮಾಣವಾಗಿದೆʼ ಎಂದು ಆರೋಪಿಸಿದರು.
ʼಮುಂಗಾರು ಮಳೆ ಸಮಯಕ್ಕೆ ಸರಿಯಾಗಿ ಬಂದಿರುವುದರಿಂದ ಜಿಲ್ಲೆಯಾದ್ಯಂತ ಉತ್ತಮ ಬಿತ್ತನೆಯಾಗಿದ್ದು, ರೈತರು ಸಾಲ ಮಾಡಿ ಶೇಂಗಾ, ಹತ್ತಿ, ಸಜ್ಜೆ, ತೊಗರಿ, ಭತ್ತ ಸೇರಿ ಇನ್ನಿತರ ಬೆಳೆಗಳನ್ನು ಬೆಳೆದಿರುತ್ತಾರೆ. ಮೂರು ಬಾರಿ ಗೊಬ್ಬರ, ಕೀಟನಾಶಕ ಸಿಂಪಡಿಸಿದರೆ ಮಾತ್ರ ಈ ಬೆಳೆಗಳು ಬರುತ್ತವೆ. ಈ ವರ್ಷ ಯೂರಿಯಾ ರಸಗೊಬ್ಬರದ ಅಭಾವವುಂಟಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆʼ ಎಂದರು.
ʼಕೃಷಿ ಅಧಿಕಾರಿಗಳು ರೈತರಿಗೆ ಗೊಬ್ಬರ ಸಿಕ್ಕಿದೆ ಎಂದು ಸುಳ್ಳು ಹೇಳುತ್ತಾರೆ. ಆದರೆ ಸಿಗುತ್ತಿಲ್ಲ. ಅಧಿಕಾರಿಗಳು ಸತ್ಯಾಂಶ ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಕೃಷಿ ಅಧಿಕಾರಿಗಳು ರೈತರಿಗೆ ಬೇಕಾಗುವಷ್ಟು ಗೊಬ್ಬರ ತರಿಸಿ ಕೊಟ್ಟು ರೈತರ ನೆರವಿಗೆ ಧಾವಿಸಬೇಕು. ನಿರ್ಲಕ್ಷ ತೋರಿಸಿದಲ್ಲಿ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ದೊರೆಯುವವರೆಗೆ ನಿರಂತರವಾಗಿ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಬೀದರ್ | ಸರ್ಕಾರಿ ಸೌಲಭ್ಯದಿಂದ ವಂಚಿತರಾದ ಅಂಗವಿಕಲ ಸಹೋದರಿಯರಿಗೆ ಬೇಕಿದೆ ಸಹಾಯಹಸ್ತ!
ಮುಖಂಡರಾದ ಹನುಮಗೌಡ ನಾರಾಯಣಪೂರ, ಸಾಹೇಬಗೌಡ ಮದಲಿಂಗನಾಳ, ವೆಂಕಟೇಶಗೌಡ ಕುಪಗಲ್, ಮಲ್ಲು ಹಾಲಭಾವಿ, ಭೀಮನಗೌಡ ಕರ್ನಾಳ, ದೇವಿಂದ್ರಪ್ಪ ತಿಪ್ಪನಟಗಿ, ಭೀಮಣ್ಣ ತಿಪ್ಪನಟಗಿ, ತಿಪ್ಪಣ್ಣ ಜಂಪಾ, ನಾಗಪ್ಪ ಕುಪಗಲ್, ಶಿವನಗೌಡ ರುಕ್ಕಾಪೂರ, ದೇವಪ್ಪ ತಿಪ್ಪನಟಗಿ, ತಿಪಣ್ಣ ತಳವಾರ, ದೇವಣ್ಣ ಎರಕಿಹಾಳ, ಯಂಕೋಬ ದೊರೆ ಕುಪಗಲ್, ಲೋಹಿತ್‌ಕುಮಾರ, ನಿಂಗನಗೌಡ ಗುಳಬಾಳ, ಮೌನೇಶ ಅರಳಹಳ್ಳಿ, ಪ್ರಭು ದೊರಿ, ತಿಪ್ಪಣ್ಣ ತಳವಾರ, ಗದ್ದೆಪ್ಪ ನಾಗಬೇವಿನಾಳ, ಖುದಾಭಕ್ಷ, ಯಂಕಪ್ಪ ದಾಸರ, ಮಾನಪ್ಪ ಕೊಂಬಿನ್, ತಿರುಪತಿ ಕುಪಗಲ್ ಮತ್ತಿತರರು ಪಾಲ್ಗೊಂಡಿದ್ದರು.