ಯಾದಗಿರಿ ಜಿಲ್ಲೆಯ ನಾರಾಯಣಪುರ ಎಡ-ಬಲದಂಡೆ ಕಾಲುವೆಗಳಿಗೆ ರೈತರ ಬೆಳೆ ರಕ್ಷಣೆಗಾಗಿ ಏಪ್ರಿಲ್ 15ರವರೆಗೆ ನೀರು ಹರಿಸಲು ಒತ್ತಾಯಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿಯಿಂದ ಯಾದಗಿರಿ ಜಿಲ್ಲಾ ಕೇಂದ್ರ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮೆಥೋಡಿಸ್ಟ್ ಚರ್ಚ್‌ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಜಮಾಯಿಸಿತು. ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಏಪ್ರಿಲ್ 6ರವರೆಗೆ ನೀರು ಹರಿಸುವುದಾಗಿ ಐಸಿಸಿ ಸಭೆಯಲ್ಲಿ ತೀರ್ಮಾನಿಸಿದ್ದಾಗಿ ಮೊದಲಿಗೆ ಸರ್ಕಾರ ಹೇಳಿತ್ತು. ಆದರೆ, ನಂತರ ಏಕಾಏಕಿ ಮಾರ್ಚ್ 25ಕ್ಕೆ ನೀರು ಹರಿಸುವುದನ್ನು ಬಂದ್ ಮಾಡುವ ನಿರ್ಣಯ ಮಾಡುವ ಮೂಲಕ ರೈತರು ಬೆಳೆದ ಬೆಳೆಗೆ ಕಂಟಕವಾಗುವಂತಹ ಆದೇಶ ಹೊರಡಿಸಿತು. ಇದರಿಂದ ಸುಮಾರು 1.5 ಲಕ್ಷ ಹೆಕ್ಟೇರ್ ವಿವಿಧ ಬೆಳೆಗಳು ನಾಶವಾಗುವ ಪರಿಸ್ಥಿತಿ ತಂದಿಟ್ಟಿದೆʼ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ʼನಾರಾಯಣಪುರ ಎಡದಂಡೆಯ ಕಾಲುವೆ ವ್ಯಾಪ್ತಿಯಲ್ಲಿ ಜಿಲ್ಲೆಯ ಹುಣಸಗಿ, ಸುರಪುರ, ಶಹಾಪುರ ತಾಲ್ಲೂಕಿನ ಲಕ್ಷಾಂತರ ಎಕರೆಯಲ್ಲಿ ಬೆಳೆದು ನಿಂತಿರುವ ಶೇಂಗಾ, ಸಜ್ಜೆ, ಜೋಳ, ಇತ್ಯಾದಿ ಬೆಳೆಗಳು 20ರಿಂದ 25 ದಿನಗಳಲ್ಲಿ ಕೈಗೆ ಬರುತ್ತವೆ. ಭತ್ತ ಈಗ ಕಟಾವು ಹಂತದಲ್ಲಿದೆ. ಈಗ ನೀರು ಅವಶ್ಯವಾಗಿದೆ. ನೀರು ಸಿಗದೇ ಹೋದಲ್ಲಿ ಕೋಟ್ಯಂತರ ರೂಪಾಯಿ ಬೆಳೆಗಳು ಕಣ್ಣ ಮುಂದೆ ಹಾಳಾಗುತ್ತವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆʼ ಎಂದು ಹೇಳಿದರು.
ʼರೈತರು ಸಾಲ ಮಾಡಿಕೊಂಡು ಪ್ರತಿ ಎಕರೆಗೆ ₹35 ರಿಂದ 45 ಸಾವಿರ ಖರ್ಚು ಮಾಡಿದ್ದಾರೆ. ಇನ್ನೇನು ಒಂದೇ ತಿಂಗಳಲ್ಲಿ ಕೈಗೆ ಹಣ ಬರುತ್ತದೆ ಎಂಬ ಕನಸು ಮಣ್ಣು ಪಾಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ರೈತರ ವಾಸ್ತವ ಪರಿಸ್ಥಿತಿಯನ್ನು ಅರಿತು ಕುಡಿಯಲು ಅಗತ್ಯ ಇರುವಷ್ಟು ನೀರು ಉಳಿಸಿಕೊಂಡು ಜಿಂದಾಲ್ ಕಂಪನಿಗೆ ಕೊಡುವ ನೀರನ್ನು ಬಂದ್ ಮಾಡಿ ಕಾಲುವೆಗೆ ನೀರು ಹರಿಸಬೇಕುʼ ಎಂದು ಆಗ್ರಹಿಸಿದರು.
ʼಬೆಳೆಗಳನ್ನು ಉಳಿಸಲು ಸರ್ಕಾರ ತುರ್ತು ಕ್ರಮಕ್ಕೆ ಮುಂದಾಗಬೇಕು. ಹತ್ತಿ, ಜೋಳ, ಮೆಣಸಿನಕಾಯಿ ಇತ್ಯಾದಿ ಶೇ80 ರಷ್ಟು ಬೆಳೆ ಕೈಗೆ ಬಂದಿವೆ. ಹೀಗಾಗಿ ಯಾವ ಭಾಗದಲ್ಲಿ ಅವಶ್ಯವಿದೆ ಎಂಬುವುದನ್ನು ಕೃಷಿ ಮತ್ತು ನೀರಾವರಿ ಅಧಿಕಾರಿಗಳು ವರದಿ ಸಲ್ಲಿಸಿರುತ್ತಾರೆ. ರೈತರ ಪರವಾದ ಕಾಳಜಿ ಇರುವ ಮುಖ್ಯಮಂತ್ರಿಯಾಗಿದ್ದಿರಿ. ಕೂಡಲೇ ನೀರು ಹರಿಸುವ ಮೂಲಕ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯೆ
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ, ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಪ್ಪ ಆನೆಗುಂದಿ, ಎಐಕೆಕೆಎಂ ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಗೂಗಲ್, ಜಿಲ್ಲಾ ಕಾರ್ಯದರ್ಶಿ ಮಲ್ಲಣ್ಣ ಚಿಂತಿ, ದಸಂಸ ಮುಖಂಡ ಮರೆಪ್ಪ ಚಟ್ಟರಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಭೀಮು ನಾಯಕ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್, ಮುಖಂಡ ಜಮಾಲ್ ಸಾಬ್ ಹೆದಗಿಮುದ್ರ, ಕರವೇ ಪ್ರಮುಖರಾದ ಸಿದ್ದು ನಾಯಕ ಹತ್ತಿಕುಣಿ, ಮಲ್ಲು ಮಾಳಿಕೇರಿ, ಶರಣು ಎಲ್ಹೇರಿ, ವೆಂಕಟೇಶ ಬೈರಿಮಡ್ಡಿ, ಸಾಹೇಬಗೌಡ ಗೌಡಗೇರಿ, ಪ್ರಕಾಶ ಜೈಗ್ರಾಂ, ಅಂಬರೀಶ ಹತ್ತಿಮನಿ, ಹಣಮಂತ, ಸಂತೋಷ ನಿರ್ಮಲಕರ್ ಮತ್ತು ಮಲ್ಲಣ್ಣ ಚಿಂತಿ, ಎಸ್.ಎಂ.ಸಾಗರ್, ಬಸ್ಸುಗೌಡ, ಸಾಂಗ್ಲಿಯಾನ ಹಾಗೂ ಕರವೇ ಪ್ರವೀಣ ಶೆಟ್ಟಿ ಬಣದ ಪದಾಧಿಕಾರಿಗಳು, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕ ಸಂಘಟನೆ ಪ್ರಮುಖರು, ಸಿಐಟಿಯು ಸಂಘಟನೆ ಕಾರ್ಯಕರ್ತರು ಪಾಲ್ಗೊಂಡಿದ್ದರು.