ಯಾದಗಿರಿ ಜಿಲ್ಲೆಯ ಹೃದಯ ಭಾಗದಲ್ಲಿರುವ ʼಲುಂಬಿನಿ ವನʼ ಉದ್ಯಾನವನವು ನಿರ್ವಹಣೆ ಇಲ್ಲದೆ ಪಾಳು ಬಿದ್ದ ಜಾಗದಂತಾಗಿದೆ. ಸ್ಥಳೀಯ ಆಡಳಿತದ ವಿರುದ್ಧ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.
ಉದ್ಯಾನವನವು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಕಳೆಹೀನವಾಗಿದೆ. ಪಾಥ್ ವೇ, ವಾಕಿಂಗ್ ವೇ, ಅಲಂಕಾರಿಕ ಗಿಡಗಳಿಗೆ ನೀರು ಹರಿಸಲು ನಿರ್ಮಾಣ ಮಾಡಲಾದ ನಲ್ಲಿಗಳು ಕೆಟ್ಟುನಿಂತಿವೆ. ವಾಕಿಂಗ್ ಮಾಡಿ ಆಶ್ರಯ ಪಡೆಯಲು ನಿರ್ಮಾಣ ಮಾಡಲಾದ ಮಂಟಪದ ಹಾಸಿಗೆ, ಮೇಲ್ಛಾವಣಿ ಕಿತ್ತು ಹೋಗಿದೆ. 2015ರ ನವೆಂಬರ್ 22ರಂದು ಉದ್ಘಾಟನೆಗೊಂಡ ಈ ಉದ್ಯಾನವನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಭಾಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

₹5 ಕೋಟಿಗೂ ಹೆಚ್ಚಿನ ಅನುದಾನದಲ್ಲಿ ಉದ್ಯಾನವನದೊಳಗೆ ವಿವಿಧ ಕಾಮಗಾರಿ ನಿರ್ಮಾಣ ಮಾಡಲಾಗಿದೆ. ಆದರೆ, ಈಗ ಎಲ್ಲವೂ ನಿಷ್ಪ್ರಯೋಜನವಾದಂತೆ ಭಾಸವಾಗುತ್ತಿದೆ. 52 ಎಕರೆ ಪ್ರದೇಶದ ವಿಶಾಲವಾದ ಲುಂಬಿನಿ ಉದ್ಯಾನವನ ಈಗ ಅಲ್ಲಲ್ಲಿ ಹಾಳಾಗಿದೆ. ಮಕ್ಕಳಿಗಾಗಿ ತೂಗುಯ್ಯಾಲೆ, ಜಾರುಬಂಡಿ ಅಳವಡಿಸಲಾಗಿದೆ. ಆದರೆ, ಆ ಜಾಗ ಈಗ ನೀರು ತುಂಬಿಕೊಂಡು ಕೆಸರುಗದ್ದೆಯಂತಾಗಿದೆ. ಮಕ್ಕಳು ಆಟವಾಡಲು ಸಾಧ್ಯವಾಗದ ಸ್ಥಿತಿ ತಲುಪಿದೆ. ಕತ್ತು ಕಿತ್ತ ಜಿರಾಫೆ, ರಂಧ್ರಗಳಿಂದ ಕೂಡಿದ ಆನೆ ಸೇರಿದಂತೆ ಬಹುತೇಕ ಅಲಂಕಾರಿಕ ಗೊಂಬೆಗಳು, ಆಟಿಕೆಗಳು ದುಸ್ಥಿತಿಯಲ್ಲಿವೆ.
ಹಸಿರು ಮಾಯಾ ವನದ ಐಲ್ಯಾಂಡ್‌ಗೆ ತೆರಳುವ ಮಾರ್ಗದಲ್ಲಿ ನೆಲಹಾಸು ಬಂಡೆಗಳು ಮೇಲೆದ್ದು, ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದೇ ಮಾರ್ಗದಲ್ಲಿ ಕಾಂಪೌಂಡ್ ಗೋಡೆ ಮುರಿದು ಬಿದ್ದಿದೆ. ಅಲ್ಲೇ ನಿರ್ಮಾಣ ಮಾಡಲಾಗಿರುವ ಕ್ಯಾಂಟೀನ್ ಮಳಿಗೆಗಳು ಬಳಕೆಗೆ ಮುನ್ನವೇ ಪಾಳು ಬಿದ್ದಿವೆ. ಸೂಕ್ತ ನಿರ್ವಾಹಣೆ ಇಲ್ಲದೆ ಮಳಿಗೆಗಳ ಮೇಲ್ಛಾವಣಿಗಳು ಕಿತ್ತು ಬೀಳುವ ಹಂತದಲ್ಲಿವೆ. ಕೋಟ್ಯಂತರ ಅನುದಾನ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ಉದ್ಯಾನವನವನ್ನು ಸಂಬಂಧಪಟ್ಟವರು ಹಾಳುಗೆಡವಿದ್ದಾರೆ. ಸೂಕ್ತ ನಿರ್ವಹಣೆ ಮಾಡಬೇಕಾದವರು ಕಂಡೂ ಕಾಣದಂತೆ ಇದ್ದಾರೆ ಎಂದು ಸ್ಥಳೀಯರು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವ ಮುಖಂಡ ರಾಹುಲ್ ಕೊಲ್ಲೂರ್ ಈದಿನ.ಕಾಮ್ ನೊಂದಿಗೆ ಮಾತನಾಡಿ, “ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಲುಂಬಿನಿ ವನದ ಆವರಣದ ಬಲ ಭಾಗದಲ್ಲಿ ಮಳೆ ಬಂದರೆ ನೀರು ನಿಲುತ್ತದೆ. ಎರಡು ಫೀಟ್ ಮಣ್ಣು ಹಾಕಿ ಎತ್ತರ ಮಾಡಬೇಕು. ವನದಲ್ಲಿರುವ ರಸ್ತೆ ಎತ್ತರವಾಗಿ ನಿರ್ಮಾಣ ಮಾಡಬೇಕಿದೆ. ಲುಂಬಿನಿ ವನವೆಂದು ಹೆಸರಿಟ್ಟರೆ ಮಾತ್ರ ಸಾಕಾಗುವುದಿಲ್ಲ ವನದಲ್ಲಿ ಗೌತಮ ಬುದ್ಧನ ಪ್ರತಿಮೆ ಸ್ಥಪನೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಕುರಿತು ಉದ್ಯಾನವನದಲ್ಲಿ ಕೆಲಸ ಮಾಡುತ್ತಿರುವ ನಾಗಪ್ಪ ಮಾತಾನಾಡಿ, “ಸಾರ್ವಜನಿಕರು ಲುಂಬಿನಿ ಉದ್ಯಾನವನಕ್ಕೆ ಪ್ರವೇಶಿಸಲು 10 ರೂಪಾಯಿ ಟಿಕೆಟ್ ಶುಲ್ಕ ದರ ಇದೆ. ಪ್ರತಿನಿತ್ಯ ಕನಿಷ್ಠ ಇನ್ನೂರು ಜನ ಬರುತ್ತಾರೆ. ಬಂದ ಹಣದಲ್ಲಿ ಅಲ್ಲೇ ಕೆಲಸ ಮಾಡುವ ನಾಗಪ್ಪ, ವಿರುಪಾಕ್ಷಯ್ಯ ಸ್ವಾಮಿ, ಬಸವರಾಜ ಸಜ್ಜನ್, ಅಪ್ಸರ ಹುಸೇನಿ, ನಾಗಮ್ಮ ಗಿರಪ್ಪನೂರ್, ನಾಗಮ್ಮ ದೋರನಹಳ್ಳಿ, ನಿರ್ಮಲ ಸೇರಿ ಏಳು ಜನ ಹಂಚಿಕೊಳ್ಳಬೇಕು. ಉದ್ಯಾನವನದಲ್ಲಿ ಡ್ಯಾಮೇಜ್ ಆಗಿರುವ ವಸ್ತುಗಳು ಕೂಡಾ ಪ್ರವೇಶ ಶುಲ್ಕದಲ್ಲಿಯೇ ದುರಸ್ತಿ ಮಾಡಿಸಬೇಕು. ಕಳೆದ 10 ವರ್ಷಗಳಿಂದ ನಮಗೆ ಉದ್ಯೋಗ ಭದ್ರತೆಯೂ ಇಲ್ಲ. ಈ ಮೊದಲು ಟೆಂಡರ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ದಿನಗೂಲಿಗೆ ಕೆಲಸ ಮಾಡುತ್ತಿದ್ದೇವೆ. ಕೂಡಲೇ ಅಧಿಕಾರಿಗಳು ಇತ್ತ ಗಮನಹರಿಸಿ ನಮಗೆ ಉದ್ಯೋಗ ಭದ್ರತೆ ನೀಡಿ, ಪಾರ್ಕ್ ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ʼಲುಂಬಿನಿ ವನʼ ಉದ್ಯಾನವನದ ದುಸ್ಥಿತಿ ಕೇವಲ ಒಂದು ಉದ್ಯಾನವನದ ನಿರ್ವಹಣಾ ಸಮಸ್ಯೆಯಲ್ಲ, ಇದು ಸಾರ್ವಜನಿಕ ಸಂಪತ್ತಿನ ಬಗ್ಗೆ ಆಡಳಿತದ ಗಂಭೀರತೆ ಕೊರತೆಯನ್ನೂ ತೋರಿಸುತ್ತದೆ. ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣಗೊಂಡ ಈ ಉದ್ಯಾನವನ ನಿರ್ಲಕ್ಷ್ಯ, ನಿರ್ವಹಣೆಯ ಕೊರತೆ ಮತ್ತು ಆಡಳಿತ ಯಂತ್ರದ ಅಸಡ್ಡೆಯಿಂದ ಇಂದು ಬಿಕೋ ಎನ್ನುತ್ತಿದೆ.

ಸ್ಥಳೀಯರ ತೀವ್ರ ಅಸಮಾಧಾನ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಗೆ ಎಚ್ಚರಿಕೆಯಾಗಬೇಕು. ಈ ಪರಿಸ್ಥಿತಿಯಿಂದ ಪಾಠಗಳನ್ನೂ ಕಲಿಯಬೇಕು. ಸಾರ್ವಜನಿಕರು ತೆರಿಗೆಯ ರೂಪದಲ್ಲಿ ಕೊಡುವ ಹಣ ಸರಿಯಾಗಿ ಬಳಕೆಯಾಗುವುದಾದರೆ ಮಾತ್ರ ಇಂಥ ಯೋಜನೆಗಳು ತಮ್ಮ ಉದ್ದೇಶ ಸಾಧಿಸಬಲ್ಲವು. ಆದ್ದರಿಂದ, ಆದಷ್ಟು ಬೇಗ ಪ್ರತ್ಯಕ್ಷ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಿ, ಉದ್ಯಾನವನದ ಪುನಶ್ಚೇತನಕ್ಕಾಗಿ ಕ್ರಮ ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
