ರೈತ ಬೆಳೆದ ಕಲ್ಲಂಗಡಿ ಹಣ್ಣನ್ನು ಕಟ್ ಮಾಡುವ ಮೂಲಕ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ್ ಹೊಸ ವರ್ಷಕ್ಕೆ ಸ್ವಾಗತ ಕೋರಿದರು.
“ಯಾದಗಿರಿ ತಾಲೂಕಿನ ಮುದ್ನಾಳ್ ಗ್ರಾಮದ ಹಣಮಂತಪ್ಪ ಚಂದಪ್ಪ ಕೋಳಿ ಇವರ ಜಮೀನಿನಲ್ಲಿ
ಸುಮಾರು 5 ವರ್ಷಗಳಿಂದ ಈ ಕಾರ್ಯವನ್ನು ನಾವು ನೈಸರ್ಗಿಕವಾಗಿ ಮತ್ತು ವಿನೂತನವಾಗಿ ಹೊಸ ವರ್ಷಾಚರಣೆ ಮಾಡುತ್ತಾ ಬಂದಿದ್ದೇವೆ. ಕೇಕ್ ಕತ್ತರಿಸುವುದು ಬೇಡ ಎಣ್ಣೆ ಪಾರ್ಟಿ ಬೇಡವೇ ಬೇಡ. ಗುಂಡಿನ ಪಾರ್ಟಿ ಮಾಡಿ ದುಂದು ವೆಚ್ಚ ಮಾಡುವುದಕ್ಕಿಂತ ರೈತ ಬೆಳೆದ ಹಣ್ಣು ಹಂಪಲು ಮತ್ತು ತರಕಾರಿ ಖರೀದಿಸಿ ಸೇವನೆ ಮಾಡಿ ಹೊಸ ವರ್ಷ ಆಚರಿಸಿ” ಎಂದು ಕರೆ ನೀಡಿದರು.
“ಇತ್ತೀಚಿನ ದಿನಗಳಲ್ಲಿ ಹೊಸ ವರ್ಷ ಸಮೀಸುತ್ತಿದ್ದಂತೆ ಬಹಳಷ್ಟು ಯುವಜನರು ಮದ್ಯಪಾನ ಸೇರಿದಂತೆ ಇತರೆ ದುಶ್ಚಟಕ್ಕೆ ಬಲಿಯಾಗುವುದು ಹೆಚ್ಚಾಗಿದೆ. ಯುವಜನರು ಈ ದುಶ್ಚಟದಿಂದ ದೂರವಿರಬೇಕು. ಗುಣಮಟ್ಟದ ಹಣ್ಣು ಹಂಪಲು ತಿನ್ನುವುದರಿಂದ ಯುವಜನರು ಆರೋಗ್ಯದಿಂದ ಸದೃಢರಾಗುತ್ತಾರೆ” ಎಂದು ಯುವಜನರಿಗೆ ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | 48 ಸ್ಥಳಗಳಲ್ಲಿ ಜೀಬ್ರಾ ಕ್ರಾಸಿಂಗ್ ನಿರ್ಮಾಣ: ಎಂಸಿಸಿ
“ಈ ವರ್ಷ ಬರಗಾಲದಿಂದ ರೈತರು ಕಂಗಲಾಗಿದ್ದಾರೆ. ಅವರು ಕಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಕಷ್ಟವನ್ನು ನಾವು ನೀಗಿಸಬೇಕೆಂದರೆ ಪ್ರತಿಯೊಬ್ಬರೂ ಅವರು ಬೆಳೆದಿರುವ ಬೆಳೆಯನ್ನು ಖರೀದಿಸಿ ಹೊಸ ವರ್ಷಾಚರಣೆ ಮಾಡಿದರೆ ಮುಂದಿನ ದಿನಗಳಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಸುನಂದಾ, ಪವನ್, ವಿಶಾಲ್, ಹರ್ಷಿತಾ, ರವಿ, ಅನಿಲ್, ಶಿವು, ವಿಜಯ, ಪ್ರಭು, ಯಲಾಲಿಂಗ, ಜಗದೀಶ್, ಅಂಪಯ್ಯ, ಸಾಬರೆಡ್ಡಿ, ನೇತ್ರಾ ಸೇರಿದಂತೆ ಬಹುತೇಕರು ಇದ್ದರು.