ಸುರಪುರ ತಾಲೂಕಿನ ದೇವಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಜನ ವಾರ್ಡ್‌ನ ಪ್ರಭಾರಿ ಮುಖ್ಯ ಶಿಕ್ಷಕ ಶಿವಶರಣ ಕುದರಿ ಅವರ ಅಮಾನತು ಆದೇಶವನ್ನು ಪರಿಶೀಲಿಸಿ ತನಿಖೆ ಬಳಿಕ ಸೇವೆಗೆ ನಿಯೋಜಿಸಲಾಗುವುದು ಎಂದು ಯಾದಗಿರಿ ಡಿಡಿಪಿಐ ಅಧಿಕಾರಿ ಭರವಸೆ ನೀಡಿದ್ದಾರೆ.
ದೇವಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರ ಅಮಾನತು ಹಿಂಪಡೆಯುವಂತೆ ಆಗ್ರಹಿಸಿ ದಸಂಸದಿಂದ ನಡೆಸಿದ್ದ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಮಾತನಾಡಿದ್ದಾರೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶಿವಶರಣ ಕುದರಿ ಅವರ ಅಮಾನತು ಆದೇಶವನ್ನು ಹಿಂಡೆಯುವಂತೆ ಆಗ್ರಹಿಸಿ ದಸಂಸ ಯಾದಗಿರಿ ಜಿಲ್ಲಾ ಶಾಖೆಯಿಂದ ಪ್ರತಿಭಟನೆ ಮಾಡುವುದರ ಮೂಲಕ ಶಾಲಾ ಶಿಕ್ಷಣ ಇಲಾಖೆ ಉಪ-ನಿರ್ದೇಶಕರು ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಶಿವಲಿಂಗ ಎಂ ಹಸನಾಪುರ ಅವರು, “ಮುಖ್ಯ ಶಿಕ್ಷಕ ಶಿವಶರಣ ಕುದರಿ ಅವರನ್ನು ಕುತಂತ್ರದಿಂದ ಅಮಾನತು ಮಾಡಿರುವುದು ಖಂಡನೀಯ. ಮುಖ್ಯ ಗುರುಗಳನ್ನು, ಶಿಕ್ಷಕರನ್ನು ನಿಯಮನುಸಾರವಾಗಿ ಸರ್ಕಾರದ ಸೇವೆಯಿಂದ ಅಮಾನತುಗೊಳಿಸಬೇಕಾದರೆ, ಶಾಲೆಗೆ ಬಂದ ಸರ್ಕಾರದ ನಿರ್ವಹಣೆ ಅನುದಾನ ದುರ್ಬಳಕೆಯಾಗಿರಬೇಕು, ಶಾಲಾ ಕಟ್ಟಡ ಕಾಮಗಾರಿಗೆ ಬಂದ ಅನುದಾನ ದುರ್ಬಳಕೆಯಾಗಿರಬೇಕು ಇಲ್ಲವೇ ಶಾಲಾ ಮಕ್ಕಳ ಜತೆಗೆ ಮತ್ತು ಪಾಲಕ-ಪೋಷಕರೊಂದಿಗೆ ಆಸಭ್ಯವಾಗಿ ವರ್ತಿಸಿದ್ದರೆ ಮಾತ್ರ ಸೇವೆಯಿಂದ ಅಮಾನತುಗೊಳಿಸುವ ಆದೇಶವಿರುತ್ತದೆ” ಎಂದರು.
“ಸದರಿ ಪ್ರಭಾರಿ ಮುಖ್ಯ ಶಿಕ್ಷಕ ಶಿವಶರಣ ಕುದರಿ ಅವರು ಎಲ್ಲ ಜವಾಬ್ದಾರಿಗಳನ್ನೂ ಸರಿಯಾಗಿ ನಿಭಾಯಿಸಿಕೊಂಡು ಬಂದಿದ್ದು, ಶಾಲಾ ಮಕ್ಕಳ ಜೊತೆ ಮತ್ತು ಪಾಲಕ-ಪೋಷಕರ ಜತೆಗೆ ಅತಿ ಸೌಜನ್ಯದಿಂದ ವರ್ತಿಸಿದ್ದಾರೆ. ಇವರ ಕುರಿತು ಪತ್ರಿಕೆಯಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಅಪಪ್ರಚಾರ ವರದಿ ನೋಡಿ, ಅಮಾನತು ಮಾಡಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
“ಆರೋಪದ ಕುರಿತು ಯಾವುದೇ ವಿಚಾರಣೆ ಮಾಡದೆ, ಈ ಶಾಲೆಗೆ ಭೇಟಿ ನೀಡದೆ, ನೋಟಿಸ್ ಜಾರಿಗೊಳಿಸದೆ, ಲಂಚ ಮತ್ತು ರಾಜಕೀಯ ಒತ್ತಡದಿಂದ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ, ಪ್ರಭಾರಿ ಮುಖ್ಯ ಶಿಕ್ಷಕ ಶಿವಶರಣ ಕುದರಿಯವರನ್ನು ಅಮಾನತುಗೊಳಿಸಿದ್ದು ತುಂಬಾ ವಿಷಾದನೀಯ. ಇದರಿಂದ ಶಾಲಾ ಮಕ್ಕಳ ವ್ಯಾಸಂಗ ಮತ್ತು ಬಿಸಿಯೂಟಕ್ಕೆ ತೊಂದರೆ ಉಂಟಾಗಿದೆ” ಎಂದರು.
“ಪ್ರಕರಣದ ಕುರಿತು ಉಲ್ಲೇಖ-2ರನ್ವಯ ಶಾಲಾ ಶಿಕ್ಷಣ ಇಲಾಖೆ ಉಪ-ನಿರ್ದೇಶಕರಿಗೆ ಮನವಿ ಮಾಡಿಕೊಳ್ಳಲು ಹೋದಾಗ, ಸದರಿ ಉಪ-ನಿರ್ದೇಶಕರು, “ನಿಮ್ಮ ವಿರುದ್ಧ ಕೇಸ್ ಮಾಡಿ ಒಳಗೆ ಹಾಕಿಸುತ್ತೇವೆ” ಎಂದು ಬೆದರಿಸಿರುವುದು ಕಾನೂನು ಬಾಹಿರವಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಎಸ್‌ಸಿ ಸಮುದಾಯಕ್ಕೆ ರುದ್ರಭೂಮಿ ಮಂಜೂರು; ಜಿಲ್ಲಾಧಿಕಾರಿ ಸೂಚನೆ
“ಈ ವಿಚಾರ ಕುರಿತು ಕೂಲಂಕುಷವಾಗಿ ಪರಿಶೀಲನೆ ಮಾಡಿ ಇದನ್ನು ಗಂಭೀರವಾಗಿ ಪರಿಗಣಿಸಿ, ಸುಳ್ಳು ವರದಿ ಸಲ್ಲಿಸಿ ಅಮಾನತುಗೊಳಿಸಲು ಸಹಕರಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸದರಿ ಪ್ರಭಾರಿ ಮುಖ್ಯ ಶಿಕ್ಷಕರ ಅಮಾನತು ಆದೇಶ ಹಿಂಪಡೆದು ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ನಮ್ಮ ಮನವಿಗೆ ಸರಿಯಾಗಿ ಸ್ಪಂದಿಸದಿದ್ದಲ್ಲಿ ಶೀಘ್ರದಲ್ಲಿಯೇ ಈ ಶಾಲಾ ಮಕ್ಕಳು, ಪಾಲಕ-ಪೋಷಕರೊಂದಿಗೆ ಸೇರಿ ದೇವಾಪುರ ರಾಜ್ಯ ಹೆದ್ದಾರಿ ತಡೆದು ತೀವ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.
ಶಿವಪುತ್ರ ಜವಳಿ ಜಿಲ್ಲಾ ಸಂಚಾಲಕ ಚಂದಪ್ಪ ಮುನ್ನಿಯಪ್ಪನೋರ, ತಿಪ್ಪಣ್ಣ ಬಿ ಶೆಳ್ಳಗಿ, ಚನ್ನಬಸಪ್ಪ ತಳವಾರ್, ಶೇಖರ್ ಮಂಗಳೂರು, ರಾಜು ಬಡಿಗೇರ, ಹಣಮಂತ ರತ್ತಾಳ, ಯಲ್ಲಪ್ಪ ರತ್ತಾಳ, ಖಾಜಾ ಅಜ್ಜೀರ, ದೇವೀಂದ್ರಪ್ಪ ವಿ ವಾಗಣಗೇರಾ ಸೇರಿದಂತೆ ಇತರರು ಇದ್ದರು.
