ಉದ್ಯೋಗ ಖಾತ್ರಿಯ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು ಹಾಗೂ ಕೆಲಸ ಮಾಡದೇ ಸತಾಯಿಸುತ್ತಿರುವ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘವು ಮಂಗಳವಾರ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹೋತಪೇಟ ಗ್ರಾಮ ಪಂಚಾಯ್ತಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.
ಹೋತಪೇಟ ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮದ ಜನರ ಕೈಗೆ ಸಿಗುತ್ತಿಲ್ಲ. ಫಾರಂ ನಂಬರ್ 6ರ ಸ್ವೀಕೃತಿ ಪತ್ರವನ್ನು ಕೂಡ ಕೂಲಿಕಾರರಿಗೆ ಕೊಡುತ್ತಿಲ್ಲ. ಕಾಲಹರಣ ಮಾಡುತ್ತಿದ್ದಾರೆ. ಒಂದು ತಿಂಗಳಿಂದ ಕಾಣೆಯಾಗಿದ್ದಾರೆ. ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಹಾಗಾಗಿ, ಪಿಡಿಓ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪಿಡಿಓ ಪ್ರತಿ ದಿನ ಪಂಚಾಯ್ತಿಯಲ್ಲಿ ಇರುವಂತೆ ಮಾಡಬೇಕು, ಈ ಹಿಂದೆ ದುಡಿದವರ 12 ಜನರ ಕೂಲಿ ಹಣ ಕೊಡಬೇಕು, ಉದ್ಯೋಗ ಖಾತ್ರಿ ಕಾಮಗಾರಿಗಳ ಕ್ರಿಯಾ ಯೋಜನೆ ಮಾಡುವಾಗ ಕೂಲಿಕಾರರನ್ನು ಸೇರಿಸಿ ಯೋಜನೆ ಮಾಡಬೇಕು, ಎಲ್ಲರಿಗೂ ಜಾಬ್ ಕಾರ್ಡ್ ಕೊಡಬೇಕು, ಆರೋಗ್ಯ ಕಾರ್ಡ್ ವಿತರಣೆ ಮಾಡಬೇಕು, ಸಮಯಕ್ಕೆ ಸರಿಯಾಗಿ NMMS ಮಾಡಬೇಕು, ಮೇಟಿಗಳ ನೋಂದಣಿ ಮಾಡಬೇಕು, ಮೇಟಿಗಳಿಗೆ ಗೌರವ ಧನ ಕೊಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನಿಟ್ಟು ಹೋತಪೇಟ ಗ್ರಾಮ ಪಂಚಾಯ್ತಿ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರು ಧರಣಿ ಸತ್ಯಾಗ್ರಹ ನಡೆಸಿದರು.
ಈ ಪ್ರತಿಭಟನೆಯ ವೇಳೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷರಾದ ದವಳಸಾಬ್ ನದಾಫ್, ಶಹಾಪುರ ತಾಲೂಕು ಘಟಕದ ಮುಖಂಡರಾದ ಗೀತಾ ಹೋತಪೇಟ, ರಂಗಮ್ಮ ಕಟ್ಟಿಮನಿ, ಭೀಮರಾಯ ಪೂಜಾರಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಹೋತಪೇಟ ಗ್ರಾಮ ಘಟಕದ ಅಧ್ಯಕ್ಷರಾದ ದೇವಪ್ಪ ಈಳಗೇರ, ಕಾರ್ಯದರ್ಶಿ ನಾಗಮ್ಮ ಕುರುಬರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
