ಯಾದಗಿರಿ ನಗರ ಠಾಣೆಯಲ್ಲಿ ಕಳೆದ ಏಳು ತಿಂಗಳಿನಿಂದ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರಶುರಾಮ್ ಅವರು ಏಕಾಏಕಿ ವರ್ಗಾವಣೆಯ ಆದೇಶ ನೀಡಿದ ಬೆನ್ನಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣ ಈಗ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ.
ಪಿಎಸ್‌ಐ ಪತ್ನಿ ಶ್ವೇತಾ ನೀಡಿದ್ದ ದೂರಿನ ಮೇರೆಗೆ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಅವರ ಪುತ್ರ ಪಂಪಣ್ಣಗೌಡ(ಸನ್ನೇ ಗೌಡ) ಮೇಲೆ ಪ್ರಕರಣ ದಾಖಲಾಗಿದೆ. ಇದರಿಂದ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಮೂಲಕ ಮೃತ ಪಿಎಸ್‌ಐ ಪರಶುರಾಮ್ ಸಾವಿನ ತನಿಖೆ ನಡೆಸಲು ಆದೇಶಿಸಿದ್ದರು.
ಇದರ ಬೆನ್ನಲ್ಲೇ ಸಿಐಡಿ ಪೋಲಿಸ್ ಡಿವೈಎಸ್‌ಪಿ ಪುನೀತ್ ಹಾಗೂ ಅಧಿಕಾರಿಗಳ ನೇತೃತ್ವದ ತಂಡ ಮೊದಲಿಗೆ ಯಾದಗಿರಿ ಡಿವೈಎಸ್‌ಪಿ ಬಸವೇಶ್ವರ ಹಾಗೂ ಸಿಪಿಐ ಸುನೀಲ್ ಮೂಲಿಮನಿ, ಪಿಎಸ್‌ಐ ಹಣಮಂತ ಬಂಕಲಗಿ ಅವರನ್ನು ವಿಚಾರಣೆ ನಡೆಸಿದರು. ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ಸದ್ಯ ಪ್ರಕರಣ ಗಂಭೀರತೆ ಪಡೆದುಕೊಂಡಿದ್ದು, ಸಿಐಡಿ ತಂಡವು ಎಲ್ಲ ಆಯಾಮಾಗಳಲ್ಲಿ ತನಿಖೆಗೆ ಮುಂದಾಗಿದೆ.
ಹಲವು ಮಹತ್ವದ ದಾಖಲೆ ವಶಕ್ಕೆ:
ಪಿಎಸ್‌ಐ ಪರಶುರಾಮ್ ಸಾವಿನ ಹಿನ್ನೆಲೆಯಲ್ಲಿ ಪ್ರಕರಣದ ಎಲ್ಲ ದಾಖಲೆಗಳನ್ನು ಹಾಗೂ ಪೆನ್‌ಡ್ರೈವ್, ಜೊತೆಗೆ ಮೊಬೈಲ್ ಫೋನ್ ಮೂಲಕ ನಡೆದ ಮಾತುಕತೆ ಹೀಗೆ ಮಹತ್ವದ ದಾಖಲೆಗಳನ್ನು ಬೆಂಗಳೂರಿನ ಸಿಐಡಿ ತಂಡ ತೆಗೆದುಕೊಂಡು ತನಿಖೆ ಆರಂಭಿಸಿದೆ.
ಪ್ರಕರಣದಲ್ಲಿ ಫೋನ್ ಸಂಭಾಷಣೆಯಲ್ಲಿ ನಡೆದ ವರ್ಗಾವಣೆಯ ಬಗ್ಗೆ ಫೋನ್ ಕಾಲ್ ಪರಿಶೀಲನೆ, ಪತ್ನಿ ಹಾಗೂ ಸಹಚರರ ಹೇಳಿಕೆ ಹೀಗೆ ಎಲ್ಲ ಆಯಾಮಗಳಲ್ಲಿ ಪ್ರಕರಣದ ಜಾಡು ಹಿಡಿದು ಸಿಐಡಿ ತಂಡ ತನಿಖೆ ನಡೆಸುತ್ತಿದೆ.

ಪರಶುರಾಮ್ ಸಾವಿನ ಪ್ರಕರಣ ಸದ್ಯ ರಾಜಕೀಯ ವಲಯದಲ್ಲೂ ಸಂಚಲನ ಮೂಡಿಸಿದೆ. ವಿಪಕ್ಷ ನಾಯಕ ಆರ್ ಅಶೋಕ್ ಕೂಡ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ಪರಶುರಾಮ್ ಮನೆಗೆ ಭಾನುವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೇ, ಪ್ರಕರಣವನ್ನು ಸಿಐಡಿ ಬದಲಿಗೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ತನಿಖೆಯಿಂದಷ್ಟೇ ಎಲ್ಲಾ ಸತ್ಯ ಹೊರಬೇಕಿದೆ.
