ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನ ಕುಂಭಮೇಳ ಕಾಲ್ತುಳಿತದಲ್ಲಿ ಬುಧವಾರ ಕರ್ನಾಟಕದ ನಾಲ್ವರು ಸೇರಿದಂತೆ 40ಕ್ಕೂ ಅಧಿಕ ಮಂದಿ ಮೃತಪಟ್ಟರು. ಅದೇ ಕ್ಷಣದಲ್ಲಿ ಘಟನಾ ಸ್ಥಳದಲ್ಲಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಇಬ್ಬರು ಯುವಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪತ್ರಕರ್ತ ರಾಘವೇಂದ್ರ ಮಾಸ್ತರ(ಕೆ.ತಳ್ಳಳ್ಳಿ) ಹಾಗೂ ಬೆವಿಕಂನಲ್ಲಿ ಕೆಲಸದಲ್ಲಿರುವ ಆತನ ಸ್ನೇಹಿತ ಪರಮಣ್ಣ ದೇವಡಿ ಮಂಜಲಾಪುರ್ ಇಬ್ಬರೂ ಕಾಲ್ತುಳಿತದ ಸಂದರ್ಭದಲ್ಲಿ ಸಾವುಗಳುಗಳನ್ನು ಕಣ್ಣಾರೆ ಕಂಡಿದ್ದೇವೆಂದು ತಿಳಿಸಿದ್ದಾರೆ.
“ನಾವಿಬ್ಬರೂ ಸೇರಿ ಜನವರಿ 23ರ ಬೆಳಿಗ್ಗೆ 9ಕ್ಕೆ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ರೇಲ್ವೆ ನಿಲ್ದಾಣದಿಂದ ನೇರವಾಗಿ ಪ್ರಯಾಗ್ ರಾಜ್‌ಗೆ ಪ್ರಯಾಣ ಬೆಳೆಸಿದೆವು. ರೈಲಿನಲ್ಲಿ ಭೇಟಿಯಾದ ಗೌರಿಬಿದನೂರಿನ ಹಿರಿಯರೊಬ್ಬರು ಸ್ನೇಹಿತರಾದರು. 26ರ ಬೆಳಿಗ್ಗೆ 4ಕ್ಕೆ ನಾವು ಪ್ರಯಾಣ ಬೆಳೆಸಿದ ರೈಲು ಪ್ರಯಾಗ್ ರಾಜ್ ಜಂಕ್ಷನ್ ತಲುಪಿತು. ಇನ್ನೇನು ಮಹಾ ಕುಂಭಮೇಳದಲ್ಲಿ ಭಾಗವಹಿಸಲು ಹೊರಡುವ ಮುಂಚೆ ಅಲ್ಲಿದ್ದ ಹಿರಿಯರೊಬ್ಬರು 29ರಂದು ಮೌನಿ ಅಮಾವಾಸ್ಯೆ ಇದೆ. ಅವತ್ತು ವಿಶೇಷ ಅಂದೇ ನೀವೆಲ್ಲ ಪವಿತ್ರ ಗಂಗಾ ಸ್ನಾನ ಮಾಡಿರೆಂದು ಸಲಹೆ ನೀಡಿದರು” ಎಂದು ಹೇಳಿದರು.
“ಆಯಿತೆಂದು ಕ್ಷಣಮಾತ್ರದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿ ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮುಗಿಸಿ ಲಕ್ಷಾಂತರ ಜನರ ನಡುವೆ ಸರದಿ ಸಾಲಿನಲ್ಲಿ ನಿಂತು ಗಡಿ ಹನುಮಾನ್ ಹಾಗೂ ಬಾಲರಾಮನ ದರ್ಶನ ಪಡೆದೆವು. ಅದೇ ರಾತ್ರಿ ಅಯೋಧ್ಯೆ ರೈಲ್ವೆ ನಿಲ್ದಾಣದಲ್ಲಿ ಮಲಗಿ ಮುಂಜಾನೆ 2ಕ್ಕೆ ಕಾಶಿ ಕಡೆಗೆ ಪ್ರಯಾಣ ಬೆಳೆಸಿದೆವು. ಕಾಶಿ, ಬನಾರಸ್, ವಾರಣಾಸಿ ಎಲ್ಲವೂ ಒಂದೇ ಎಂಬುದು ಅಂದೇ ಗೊತ್ತಾಗಿದ್ದು. ನಂತರ ಕಾಶಿಗೆ ತಲುಪಿದ ನಾವು ಗಂಗಾನದಿಯಲ್ಲಿ ಬೋಟ್‌ಗಳಲ್ಲಿ ವಿಹಾರ ಮುಗಿಸಿ ಕಾಳಭೈರವ, ಕಾಶಿ ವಿಶ್ವನಾಥನ ದರ್ಶನ ಪಡೆದೆವು” ಎಂದರು.
“ಕಾಶಿಯಿಂದ ಪ್ರಯಾಗ್ ರಾಜ್ ಕಡೆಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಸಂಗಮ ಇನ್ನೂ ಹತ್ತು ಕಿಲೋಮೀಟರ್ ದೂರ ಇರುವಾಗಲೇ ಟ್ರಾಫಿಕ್ ಸಮಸ್ಯೆಯಿಂದಾಗಿ ಬ್ಯಾರಿಕೇಡ್ ಹಾಕಿ ತಡೆಯಲಾಗಿತ್ತು. ಸುಮಾರು ಹತ್ತು ಕಿಲೋಮೀಟರ್ ದೂರ ಕ್ರಮಿಸಿ ಕಲ್ಪವೃಕ್ಷ ದ್ವಾರ ತಲುಪಿದೆವು. ಅಲ್ಲೇ ಸೆಕ್ಟರ್ ನಂಬರ್ 18ರಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಟೆಂಟ್ ಸೇರಿದೆವು. ನಂತರ ರಾತ್ರಿಯಿಂದಲೇ ಪವಿತ್ರ ಗಂಗಾ ಸ್ನಾನ ಪ್ರಾರಂಭವಾವಾಗಿತ್ತು. ಮುಂಜಾನೆ 2 ಗಂಟೆಯ ಆಸುಪಾಸಿನಲ್ಲಿ ಕಾಲ್ತುಳಿತ ಸಂಭವಿಸಿತು. ಯಾದಗಿರಿ ಜಿಲ್ಲೆಯ ಇಬ್ಬರು, ತುಮಕೂರು ಜಿಲ್ಲೆಯ ನಾಲ್ವರು ಹಾಗೂ ಗೌರಿಬಿದನೂರಿನ ಒಬ್ಬರು ಸೇರಿದಂತೆ ಒಟ್ಟು 07 ಮಂದಿ ಘಟನೆ ನಡೆದ ಸ್ಥಳದಲ್ಲಿ ಜತೆಯಲ್ಲಿಯೇ ಇದ್ದೆವು” ಎಂದು ಹೇಳಿದರು.
ಕ್ಷಣ ಮಾತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗಲೇ ಇಲ್ಲ. ಅಮ್ಮಾ, ಅಪ್ಪ ದೇವರೇ ಕಾಪಾಡಿ ಅನ್ನೋದಷ್ಟೇ ಕೆಳ್ತಿತ್ತು.
ಕಾಲ್ತುಳಿತಕ್ಕೆ ಮುಖ್ಯ ಕಾರಣ
- ಪೋಲೀಸ್ ಇಲಾಖೆ ವೈಫಲ್ಯ : ಸಂಗಮದ ಪವಿತ್ರ ಗಂಗಾ ಸ್ನಾನ ಮಾಡುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಇರಲಿಲ್ಲ ಮತ್ತು ಮಿತಿಮೀರಿ ಜನ ಸೇರಿದ್ದರಿಂದ ಜನರನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
- ಗಂಗಾ ಸ್ನಾನ ಮಾಡುವ ಸ್ಥಳದಲ್ಲಿ ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಮಲಗಲು ಅವಕಾಶ ನೀಡಿದ್ದರು. ಹೀಗಾಗಿ ಕಾಲ್ತುಳಿತ ಸಂಭವಿಸಿದೆ.
- ಅಘೋರಿಗಳು, ನಾಗ ಸಾಧುಗಳು ಹಾಗೂ ಸ್ವಾಮಿಜಿಗಳು ಸನ್ಯಾಸಿಗಳನ್ನು ಒಂದೇ ಮಾರ್ಗದಲ್ಲಿ ಬಿಟ್ಟಿರುವುದು.
- ಸ್ವಾಮಿಗಳು ಮತ್ತು ಇತರ ವಿವಿಐಪಿಗಳ ವಾಹನಗಳು ಅಡ್ಡಾದಿಡ್ಡಿಯಾಗಿ ನಿಂತು ಟ್ರಾಫಿಕ್ ಸಮಸ್ಯೆ ಉಂಟಾಗಿ ಕಾಲ್ತುಳಿತ ಸಂಭವಿಸಿದೆ.
- ಅಧಿಕಾರಿಗಳು ಸ್ನಾನ ಮಾಡಲು ಹೋರಟವರನ್ನು ಮತ್ತು ಸ್ನಾನ ಮುಗಿಸಿ ಹಿಂತಿರುಗುತ್ತಿರುವವರನ್ನು ಒಂದೇ ಮಾರ್ಗ ದಲ್ಲಿ ಬಿಟ್ಟಿರುವುದು ಪ್ರಮುಖ ಕಾರಣ.
“ಕಾಲ್ತುಳಿತ ಸಂದರ್ಭದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರ ಕೂಗು ಹೇಳತೀರದಾಗಿತ್ತು. ಅದನ್ನು ನೆನೆಸಿಕೊಂಡರೆ ಇನ್ನೂ ಕಣ್ಣಲ್ಲಿ ನೀರು ಬರುತ್ತದೆ. ಸಾವಿನ ಸಂಖ್ಯೆ ಹೆಚ್ಚುತ್ತಿರುವ ಸುದ್ದಿ ತಿಳಿದ ಕೂಡಲೇ ಬೆಳಿಗ್ಗೆ 11ಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೆಲಿಕಾಫ್ಟರ್ ಮೂಲಕ ವೀಕ್ಷಿಣೆ ಮಾಡಿದರು” ಎಂದರು.
“ಪವಿತ್ರ ಗಂಗಾ ಸ್ನಾನ ಮಾಡಲು ಬಂದ ಸುಮಾರು 11 ಕೋಟಿಗಿಂತ ಹೆಚ್ಚು ಜನರ ಮುಖದಲ್ಲಿ ನಗುವೇ ಇರಲಿಲ್ಲ. ಎಲ್ಲರ ಮುಖದಲ್ಲಿ ಭಯ, ನೋವು, ಹೆದರಿಕೆ ಕಂಡುಬರುತ್ತಿತ್ತು. ಕಾಲ್ತುಳಿತದಲ್ಲಿ ನೆಲಕ್ಕೆ ಬಿದ್ದ ತಾಯಿ ಮಗು ಮತ್ತು ವೃದ್ಧ ದಂಪತಿಗಳನ್ನು ತಮ್ಮ ಪ್ರಾಣದ ಹಂಗು ತೊರೆದು ಕಾಪಾಡಿದ ತೃಪ್ತಿ ಒಂದೆಡೆಯಾದರೆ ನಾವೆಲ್ಲಿ ಬದುಕಿ ಊರು ಸೇರ್ತೀವೋ ಇಲ್ವೋ ಅನ್ನೋ ನೋವು ಸದಾ ಕಾಡುತ್ತಿತ್ತು” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕಾಡಿನಲ್ಲೇ ಉಳಿದಿದ್ದ ನಕ್ಸಲ್ ಹೋರಾಟಗಾರ ರವೀಂದ್ರ, ಇಂದು ಮುಖ್ಯವಾಹಿನಿಗೆ!
“ಘಟನೆ ನಡೆದಿರುವ ಬಗ್ಗೆ ಕಣ್ಣಾರೆ ಕಂಡಿದ್ದೇವೆ. ಆದರೆ ಮೃತಪಟ್ಟವರ ಹಾಗೂ ಅಸ್ವಸ್ಥಗೊಂಡವರ ಬಗ್ಗೆ ಮಾಹಿತಿ ಇರಲಿಲ್ಲ. ಜತೆಗೆ ಯಾವುದೇ ಫೋನುಗಳು ಮತ್ತು ನೆಟ್‌ವರ್ಕ್, ಅಂತರ್ಜಾಲಗಳು ಕೆಲಸ ಮಾಡಲಿಲ್ಲ. ಟಿವಿ ನೋಡಿದ ನಮ್ಮ ಸಂಬಂಧಿಕರು, ಸ್ನೇಹಿತರು ಕರೆ ಮಾಡಿದರೂ ಅರ್ಧಂಬರ್ಧ ಕರೆ ಸ್ವೀಕರಿಸಿದಾಗ ನಮಗೆ ಬಂದ ಪೋನ್ ಕರೆಗಳೇ ನಮಗೆ ಮಾಹಿತಿ ನೀಡಿದ್ದು. ಜನಸಂಖ್ಯೆ ತುಂಬಾ ಇರುವ ಕಾರಣ ಘಟನೆ ನಡೆದ ಸ್ಥಳದಿಂದ ಸುಮಾರು 25 ಕಿಲೋಮೀಟರ್‌ಗಳಷ್ಟು ದೂರ ಯಾವುದೇ ವಾಹನಗಳು ಇರದ ಕಾರಣ 30 ಕಿಲೋಮೀಟರ್ ದೂರ ದಿನವಿಡೀ ನಡೆದು ಸಾಯಂಕಾಲ ಪ್ರಯಾಗ್ ರಾಜ್ ತಲುಪಿದೆವು” ಎಂದು ತಿಳಿಸಿದರು.
“ಎಲ್ಲಿ ನೋಡಿದರೂ ಜನರೇ ಇರುವ ಕಾರಣ ಜನಸಂಖ್ಯೆ ಹೆಚ್ಚಳದಿಂದ ದಾರಿ ಕಾಣದಾದ ಅಧಿಕಾರಿಗಳು ಮತ್ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ವಾಹನಗಳನ್ನು ಬಂದ್ ಮಾಡಿ ಪ್ರಯಾಗ್ ಮತ್ತು ಪ್ರಯಾಗ್ ರಾಜ್, ಅಲಹಾಬಾದ್ ಹಾಗೂ ಲಕ್ನೋ ನಗರಗಳ ಮುಖ್ಯ ರಸ್ತೆಗಳ ಕಾಲುದಾರಿ ಸೇರಿದಂತೆ ವಿವಿಧ ಪಾರ್ಕ್‌ಗಳಲ್ಲಿ ಮಲಗಲು ವ್ಯವಸ್ಥೆ ಮಾಡಿದರು. ಗುರುವಾರ ಪ್ರಯಾಣಕ್ಕೆ ಯಾವುದೇ ಅವಕಾಶ ಸಿಗದ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸ್ಟೇಷನ್ ಹಾಗೂ ಪಾರ್ಕ್‌ಗಳಲ್ಲಿ ಕಾಲ ಕಳೆದು ಶುಕ್ರವಾರ ರಾತ್ರಿ ಹೊರಡಲು ಸಿದ್ಧತೆ ಮಾಡಿಕೊಂಡೆವು” ಎಂದು ರಾಘವೇಂದ್ರ ಮಾಸ್ತರ ಈ ದಿನ.ಕಾಮ್‌ಗೆ ತಿಳಿಸಿದರು.