ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಮೂವರು ಮೃತಪಟ್ಟಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ನಡೆದಿದೆ. ಸಾವಿಗೆ ಕಲುಷಿತ ನೀರು ಸೇವನೆ ಕಾರಣ ಎಂದು ಶಂಕಿಸಲಾಗಿದೆ.
ದೇವಿಕೆಮ್ಮ ಹೊಟ್ಟಿ (48), ವೆಂಕಮ್ಮ (60), ರಾಮಣ್ಣ ಪೂಜಾರಿ (50) ಮೃತರು ಎಂದು ತಿಳಿದು ಬಂದಿದೆ.
ಕಳೆದ 10 ದಿನಗಳ ಹಿಂದೆ ಕಲುಷಿತ ನೀರು ಸೇವಿಸಿದ ಪರಿಣಾಮ 8 ಜನರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅವರಲ್ಲಿ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ಯಾದಗಿರಿ ಡಿಎಚ್ಒ ಡಾ.ಮಹೇಶ ಬಿರಾದಾರ ಮಾತನಾಡಿ, ‘ಒಟ್ಟು 8 ಜನ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದಾರೆ. ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರು ಮೃತಪಟ್ಟಿದ್ದಾರೆ. ಸಾವಿಗೆ ಕಲುಷಿತ ನೀರು ಕಾರಣ ಎಂಬುದು ಖಚಿತವಾಗಿದೆ ಹೇಳಲಾಗುವುದಿಲ್ಲ. ಸ್ಥಳಕ್ಕೆ ಭೇಟಿ ನೀಡುತ್ತಿದ್ದೇನೆ’ ಎಂದು ತಿಳಿಸಿದರು.
ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.