ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಹಣವನ್ನು ದುರ್ಬಳಕೆ ಮಾಡಿರುವ ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಯಾದಗಿರಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ದಸಂಸ ಜಿಲ್ಲಾಧ್ಯಕ್ಷ ಮರೆಪ್ಪ ಚಟ್ಟೇರಕರ್ ಮಾತನಾಡಿ, “ಗ್ಯಾರಂಟಿ ಯೋಜನೆ ಅಥವಾ ಅನ್ಯ ಉದ್ದೇಶಗಳಿಗೆ ಬಳಸಿಕೊಂಡ ಎಸ್‌ಎಸ್‌ಪಿ/ಟಿಎಸ್‌ಪಿ ಹಣ ಹಿಂದಿರುಗಿಸಬೇಕು. ಎಸ್‌ಎಸ್‌ಪಿ/ಟಿಎಸ್‌ಪಿ ಕಾಯ್ದೆಯ 7 ‘ಸಿ’ಯನ್ನು ರದ್ದುಪಡಿಸಬೇಕು” ಎಂದು ಆಗ್ರಹಿಸಿದರು.
“ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದಾಗ 2013-14ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ ಸರ್ಕಾರವೇ ಜಾರಿಗೆ ತಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಕಾಯ್ದೆಯು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಭಿವೃದ್ಧಿಯಲ್ಲಿನ ಅಂತರವನ್ನು ತುಂಬಲು ಅನುಮೋದಿಸಿರುವ ಯೋಜನೆ. ಅಂದರೆ ಮಾನವ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿರ್ದಿಷ್ಟವಾಗಿ ಗೊತ್ತುಪಡಿಸಬಹುದಾದಂತೆ ರಾಜ್ಯ ಸರಾಸರಿಗೆ ಹೋಲಿಸಿದಾಗ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸೂಚಕಗಳಲ್ಲಿರುವ ವ್ಯತ್ಯಾಸಗಳೆಂದು ವ್ಯಾಖ್ಯಾನಿಸುತ್ತದೆ. ಸಾರಾಂಶದಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರು(ದಲಿತರು) ಮತ್ತು ಇತರ ಸಮುದಾಯಗಳ ನಡುವಿನ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದೇ ಈ ಯೋಜನೆಯ ಮೂಲ ಉದ್ದೇಶ” ಎಂದು ಹೇಳಿದರು.
“ಕರ್ನಾಟಕ ಮಾನವ ಅಭಿವೃದ್ಧಿ ವರದಿ 2015ರ ಪ್ರಕಾರ ಇತರೆ ಸಮುದಾಯಗಳಿಗೆ ಹೋಲಿಸಿಕೊಂಡರೆ ದಲಿತರು ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಸರಾಸರಿ ಅಭಿವೃದ್ಧಿಗಿಂತಲೂ ದಲಿತರು ಕಡಿಮೆ ಅಭಿವೃದ್ಧಿ ಹೊಂದಿರುವುದು ಕಂಡುಬಂದಿದೆ. ಹೀಗಿರುವಾಗ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯು ದಲಿತರಿಗೆ ಮೀಸಲಿಡುವ ಹಣವನ್ನು ಅಸಮಾನತೆಯ ಅಂತರವನ್ನು ಕಡಿಮೆ ಮಾಡುವ ಯೋಜನೆಗಳಲ್ಲಿ ವಿನಿಯೋಗಿಸಬೇಕೇ ಹೊರತು ಎಲ್ಲರ ಅಭಿವೃದ್ಧಿಗೆ ರೂಪಿಸುವ ಯೋಜನೆಗಳಲ್ಲಿ ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“2023-24ನೇ ಸಾಲಿನಿಂದಲೂ ಸುಮಾರು ₹25,000 ಕೋಟಿಯನ್ನು ಗ್ಯಾರಂಟಿಗಳಿಗೂ, ₹15,000 ಕೋಟಿಯನ್ನು ಅನ್ಯ ಉದ್ದೇಶಕ್ಕೂ ಬಳಸಿರುವುದು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದಂತೆ ಆಗುತ್ತದೆ. ಅಷ್ಟೇ ಅಲ್ಲ, ಕಳೆದ ಬಿಜೆಪಿ ಸರ್ಕಾರ ಮಾಡಿದ ಕೆಲಸವನ್ನೇ ಕಾಂಗ್ರೆಸ್ ಸರ್ಕಾರವೂ ಮಾಡಿದಂತಾಗಿದೆ. ಅದಷ್ಟೇ ಅಲ್ಲದೆ ಸರ್ಕಾರ, ಮುಖ್ಯಮಂತ್ರಿಗಳು, ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಇತರ ಮಂತ್ರಿಗಳೂ ಈ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ ಮತ್ತು ಖಂಡನೀಯ. ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂಬಂತೆ ದಲಿತರ ಓಗ್ಗಟ್ಟಿನ ಓಟುಗಳಿಂದ ಸರ್ಕಾರ ರಚಿಸಿದ ಕಾಂಗ್ರೆಸ್, ಈಗ ದಲಿತರ ಅಭಿವೃದ್ಧಿಗೆ ಮೀಸಲಿರಿಸಿದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಹಾಗೂ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ದಲಿತ ಸಮುದಾಯಗಳಿಗೆ ಬಗೆದ ‘ಮಹಾ ದ್ರೋಹʼವಾಗಿದೆ. ಹಾಗಾಗಿ ದಲಿತ ಸಂಘರ್ಷ ಸಮಿತಿ ಸರ್ಕಾರದ ಈ ದುರ್ವತನೆ ತೀವ್ರ ಖಂಡನೀಯ” ಎಂದರು.
“ಗ್ಯಾರಂಟಿ ಯೋಜನೆಗಳು ಉತ್ತಮ ಯೋಜನೆಗಳೇ. ಕನ್ನಡಿಗರೆಲ್ಲರಿಗೂ ಈ ಯೋಜನೆಯಿಂದ ಅನುಕೂಲವಾಗಿದೆ, ಸಂತೋಷ. ಆದರೆ ಗ್ಯಾರಂಟಿಗಳ ಉದ್ದೇಶವೇ ಬೇರೆ, ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಉದ್ದೇಶವೇ ಬೇರೆ. ಗ್ಯಾರಂಟಿಗಳು ದಲಿತರು ಮತ್ತು ದಲಿತೇತರರ ನಡುವಿನ ಸಾಮಾಜಿಕ-ಆರ್ಥಿಕ ಅಸಮಾನತೆಯ ಅಂತರವನ್ನು ಕಡಿಮೆ ಮಾಡುವುದಿಲ್ಲ. ಆದ್ದರಿಂದ ಈಗಿಂದೀಗಲೇ ಗ್ಯಾರಂಟಿಗಳಿಗೆ ಬಳಸಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ದಲಿತರ ಅಭಿವೃದ್ಧಿಗೆ ಹಿಂದಿರುಗಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕಾಮಗಾರಿ ಟೆಂಡರ್ ಆದೇಶಪ್ರತಿ ನೀಡುವಂತೆ ಮಲ್ಲಾಬಾದ್ ಏತ ನೀರಾವರಿ ರೈತ ಹೋರಾಟ ಸಮಿತಿ ಆಗ್ರಹ
“ಈ ಹಿಂದೆ ದಲಿತ ಸಂಘಟನೆಗಳ ಒತ್ತಾಯಕ್ಕೆ ಮಣಿದು ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ‘7ಡಿ’ ಸೆಕ್ಷನ್ ರದ್ದುಪಡಿಸಿದಂತೆ ‘7ಸಿ’ಯನ್ನೂ ರದ್ದುಪಡಿಸಬೇಕು. ಸಂವಿಧಾನ ವಿಧಿ 46ರ ಆಶಯವನ್ನು ಪಾಲಿಸಬೇಕು. ಇಲ್ಲದಿದ್ದರೆ ಪ್ರತಿ ಜಿಲ್ಲಾ ಕೇಂದ್ರ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸರ್ಕಾರವನ್ನು ಎಚ್ಚರಿಸುವುದು ಅನಿವಾರ್ಯವಾಗುತ್ತದೆ” ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಗೋಪಾಲ ತೆಳಗೇರಿ, ಪರಶುರಾಮ್ ಒಡೆಯರ್, ಸಂಪತ್ ಚಿನ್ನಾಕಾರ, ಭೀಮರಾಯ ಹೊಸಮನಿ, ಬಾಲರಾಜ ಖಾನಾಪೂರ, ವಸಂತ ಸುಂಗಲಕರ್, ಮಲ್ಲಿಕಾರ್ಜುನ ಕುರಕುಂದಿ, ಆನಂದ ಹೊಸಳ್ಳಿ, ನಾಗರಾಜ ಕೂಲೂರ್,
ಮದೇವಪ್ಪ ಬದ್ದೆಪಲ್ಲಿ, ಮಲ್ಲಪ್ಪ ನೂಲ, ಮಲ್ಲಿಕಾರ್ಜುನ ಸೇರಿದಂತೆ ಇತರರು ಇದ್ದರು.