ಕುರಿಗಳನ್ನು ಕುತ್ತಿಗೆ ಮತ್ತು ಹೊಟ್ಟೆ ಭಾಗದಲ್ಲಿ ಕೊಯ್ದು ಹತ್ಯೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಂಡಗಳ್ಳಿ ಗ್ರಾಮದ ಮಲ್ಲಪ್ಪ ಅವರು ಕುರಿಸಾಕಾಣಿಕೆ ಮಾಡಲು ಕಳೆದ 10 ತಿಂಗಳ ಹಿಂದಷ್ಟೆ 30 ಕುರಿಗಳನ್ನು ಖರೀದಿಸಿದ್ದರು. ಮನೆ ಹತ್ತಿರದ ಕುರಿಹಟ್ಟಿಯಲ್ಲಿ ಕುರಿಗಳನ್ನು ಬಿಡಲಾಗುತ್ತಿತ್ತು. ನಿನ್ನೆ ರಾತ್ರಿ ದುಷ್ಕರ್ಮಿಗಳು ಕುರಿಗಳ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ.
ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಯಾರೆಂದು ತಿಳಿದುಬಂದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಶುಕ್ರವಾರ ರಾತ್ರಿ ಸಮಯದಲ್ಲಿ ತಂದೆಗೆ ಮೈ ಹುಷಾರಿಲ್ಲವೆಂದು ಹಟ್ಟಿ ಬಿಟ್ಟು ಮನೆಯಲ್ಲಿ ಮಲಗಿದ್ದೆ. ಈ ಸಮಯ ನೋಡಿಕೊಂಡು ಕಿಡಿಗೇಡಿಗಳು 16 ಕುರಿಗಳ ಕತ್ತು, ಹೊಟ್ಟೆ ಸೀಳಿ ಹತ್ಯೆ ಮಾಡಿದ್ದಾರೆ” ಎಂದು ಸಂತ್ರಸ್ತ ಮಲ್ಲಪ್ಪ ತಿಳಿಸಿದ್ದಾರೆ.
“ಅಂದಾಜು 5 ಲಕ್ಷ ರೂ.ಮೌಲ್ಯದ ನಷ್ಟ ಉಂಟಾಗಿದೆ. ಉದ್ದೇಶ ಪೂರ್ವಕವಾಗಿ ಕುರಿಗಳನ್ನು ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕುರಿಗಾಹಿಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ತಪ್ಪತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು” ಎಂದು ಯುವ ಹೋರಾಟಗಾರ ದಲಿತ ಮುಖಂಡ ಶರಣರೆಡ್ಡಿ ಹತ್ತಿಗೂಡುರ್ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಸಾಲ ಪಾವತಿಸುವಂತೆ ಮೈಕ್ರೋ ಫೈನಾನ್ಸ್ ಕಿರುಕುಳ; ರೈತ ಮಹಿಳೆ ಆತ್ಮಹತ್ಯೆ
“ಕುರಿಗಳ ಮರಣದಿಂದ ಕುರಿಗಾಹಿಗೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟ ಉಂಟ್ಟಾಗಿದ್ದು, ಅತ್ಯಂತ ದುಃಖ ಉಂಟು ಮಾಡಿದೆ. ಗ್ರಾಮದಲ್ಲಿಯೂ ದುಃಖಮಯ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಇಲಾಖೆಯಿಂದ ಸಮಗ್ರ ತನಿಖೆ ನಡೆಯಬೇಕು. ಸರ್ಕಾರ, ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಕುರಿಗಾಹಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.