ರೈತರ ಪಂಪ್‌ಸೆಟ್‌ಗಳ ಮೋಟರ್ ಸ್ಟಾರ್ಟರ್, ಕಾಪರ್ ವೈರ್, ಕೇಬಲ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡುವ ವ್ಯವಸ್ಥಿತ ಜಾಲ ಯಾದಗಿರಿ ಜಿಲ್ಲೆ ವಡಗೇರಿ ತಾಲೂಕಿನಲ್ಲಿ ನಡೆಯುತ್ತಿದ್ದು, ಕೂಡಲೇ ಕಳ್ಳಕಾಕರನ್ನು ಮಟ್ಟ ಹಾಕಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ಆಗ್ರಹಿಸಿದರು.
“ಬೆಳ್ಳಿ ಬಂಗಾರ, ಹಣ ಕಳುವು ಮಾಡುವುದು ಸರ್ವೇ ಸಾಮಾನ್ಯ. ಆದರೆ ವಡಗೇರಿ ತಾಲೂಕಿನ ಗುರುಸುಣಿಗಿ ಮತ್ತು ನಾಯ್ಕಲ್ ಮಧ್ಯದಲ್ಲಿರುವ ಭೀಮಾನದಿ ತೀರದ ರೈತರಿಗೆ ಇದೀಗ ಈ ವಿದ್ಯುತ್ ಉಪಕರಣಗಳ ಕಳವು ತಲೆನೋವಾಗಿ ಪರಿಣಮಿಸಿದೆ. ಇಡೀ ರಾತ್ರಿ 16 ಮೋಟರ್‌ಗಳ ಪೈಕಿ ಸುಮಾರು 11 ಮಂದಿ ರೈತರ ಪಂಪ್‌ಸೆಟ್ ಮೋಟರ್ ಕಾಪರ್ ವೈರ್‌ಗಳನ್ನು ಬಿಚ್ಚಿ ಕಳುವು ಮಾಡಿದ್ದಾರೆ. ಮೊದಲೇ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದು ಕೇವಲ 7 ತಾಸು ವಿದ್ಯುತ್ ನೀಡುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ಇದರಲ್ಲಿ ಈ ಕಳವು ಪ್ರಕರಣಗಳಿಂದ ರೈತರು ರೋಸಿ ಹೋಗಿದ್ದಾರೆ” ಎಂದರು.
“ವಡಗೇರಿ ಅಪರಾಧ ವಿಭಾಗದ ಪಿಎಸ್‌ಐ ಹಣಮಂತ ಮುಂಡರಗಿ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಇದು ಕಾಟಾಚಾರದ ಭೇಟಿ ಆಗಬಾರದು, ಕಳ್ಳರ ಪತ್ತೆ ಮಾಡಬೇಕು. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ರೈತರು ಈ ಕಳವು ಪ್ರಕರಣಗಳಿಂದ ನಿದ್ದೆ ಮಾಡದಂತೆ ರಾತ್ರಿಯೆಲ್ಲ ಎಚ್ಚರವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆಮ್ಮದಿ ಹಾಳಾಗಿದೆ. ನಾಡಿನ ಅನ್ನದಾತನಾಗಿರುವ ರೈತರು ದೇಶದ ಬೆನ್ನೆಲುಬು ಎನ್ನಲಾಗುತ್ತದೆ. ಆದರೆ ರೈತರು ಸಂಕಷ್ಟದಲ್ಲಿ ಬದುಕುತ್ತಿರುವಾಗ ಬೆಲೆ ಏರಿಕೆ ಸಮಸ್ಯೆ ನಡುವೆಯೇ ಸಾಲ ಮಾಡಿ ನಾಡಿನ ಹೊಟ್ಟೆ ತುಂಬಿಸುತ್ತಾನೆ. ಅಂತಹ ರೈತನಿಗೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಬರಗಾಲ ಎದುರಾಗಿರುವ ಇಂತಹ ಸಂದರ್ಭದಲ್ಲಿ ಪಂಪ್‌ಸೆಟ್ ಕಾಪರ್ ವೈರ್, ಸ್ಟಾರ್ಟರ್, ಕೇಬಲ್‌ಗಳನ್ನು ಕಳವು ಮಾಡುತ್ತಿರುವುದರಿಂದ ರೈತರ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ. ಕೂಡಲೇ ಕಳ್ಳರನ್ನು ಪತ್ತೆ ಹಚ್ಚಿ ಅವರ ಹೆಡೆಮುರಿ ಕಟ್ಟಬೇಕು. ಅವರಿಂದಲೇ ನಷ್ಟ ಭರಿಸಿಕೊಡಬೇಕು ಮತ್ತು ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸಬೇಕು” ಎಂದರು.
“ಅನ್ನ ಬೆಳೆಯುವ ರೈತರಿಗೆ ಅಗುಳಿನ ಬೆಲೆ ಗೊತ್ತಿರುತ್ತದೆ. ಆದರೆ ಆತನಿಗೆ ಭಾರೀ ಬೆಲೆ ತೆರುವಂತಾಗಬಾರದು. ಕೇವಲ ವಿದ್ಯುತ್ ಸಾಮಗ್ರಿ ಕಳುವು ಮಾಡಿದರೂ ರೈತರು ಮತ್ತೆ ಇಡೀ ಸೆಟ್ ಕೊಳ್ಳಬೇಕೆಂದರೆ ಅಂದಾಜು ₹10,000ದಿಂದ ₹11,000 ಬೇಕಾಗುತ್ತದೆ. ಇದರಿಂದ ರೈತರಿಗೆ ಸಮಸ್ಯೆ ಉಂಟಾಗಿದೆ. ಹಾಗಾಗಿ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರನ್ನು ಪತ್ತೆಹಚ್ಚಿ ರೈತರಿಗೆ ನೆಮ್ಮದಿ ತಂದುಕೊಡಬೇಕು” ಎಂದು ಆಗ್ರಹಿಸಿರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ವಿವಿಧ ಸಂಘಟನೆಗಳ ಹೋರಾಟ; ತವಗ, ಕಡ್ಡೋಣ, ರೋಡಲಬಂಡ ಗ್ರಾಮಗಳಿಗೆ ಅಧಿಕಾರಿಗಳ ಭೇಟಿ
“ಆದಷ್ಟು ಬೇಗ ಕಳ್ಳರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲವಾದಲ್ಲಿ ನಾಯ್ಕಲ್ ಗುರುಸುಣಿಗಿ ನಡುವೆ ಬರುವ ವಿಜಯಾಪುರ-ಹೈದರಾಬಾದ್ ಹೆದ್ದಾರಿ ಬಂದ್ ಮಾಡಿ ರೈತರೊಂದಿಗೆ ಸೇರಿ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದರು.
ಈ ವೇಳೆ ರೈತರುಗಳಾದ ಮಲ್ಲಿಕಾರ್ಜುನರೆಡ್ಡಿ ನಾಯ್ಕಲ್, ನಿಂಗಪ್ಪ ಮಳ್ಳಳ್ಳಿ ಸೇರಿದಂತೆ ಬಹುತೇಕ ರೈತರು ಇದ್ದರು.