ಸಂವಿಧಾನದ ಹೆಸರಲ್ಲಿ ಪ್ರಜಾಪ್ರಭುತ್ವ ವಿರೋಧಿ ಮನುಸೃತಿಯನ್ನು 2025ರ ಫೆಬ್ರವರಿ 3ರಂದು ಜಾರಿಗೆ ತರಲು ಹೊರಟಿರುವ ಮನುವಾದಿಗಳ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಹಲವು ಸಂಘಟನೆಗಳು ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ, ಕರ್ನಾಟಕ ರಾಜ್ಯ ದಲಿತ ಮಹಿಳಾ ಒಕ್ಕೂಟ(ಕ್ರಾಂತಿಕಾರಿ) ಸುರಪುರ ತಾಲೂಕು ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಮಹಾತ್ಮ ಗೌತಮಬುದ್ಧ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಮೆರವಣಿಗೆ ತೆರಳಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕರಾದಸಂಸ(ಕ್ರಾಂತಿಕಾರಿ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, “ಭಾರತದಲ್ಲಿ ರಾಜ್ಯ ಪ್ರಭುತ್ವವನ್ನು ಧಿಕ್ಕರಿಸಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಗಿದೆ. ಈ ಪ್ರಜಾಪ್ರಭುತ್ವದಡಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನತೆ, ಸಹೋದರತೆ, ಭ್ರಾತೃತ್ವ ಸೇರಿದಂತೆ ಮನುಷ್ಯರನ್ನು ಮನುಷ್ಯರಂತೆ ಕಂಡು ಪ್ರೀತಿಯಿಂದ ಬಾಳುವಂತಹ ಹಕ್ಕು ನೀಡಿದ್ದು, ಬಹುಜನರ ಹಿತಾಯ, ಬಹುಜನರ ಸುಖಾಯ ಎಂಬ ತತ್ವದಡಿಯಲ್ಲಿ ಬಾಬಾ ಸಾಹೇನ್ ಅಂಬೇಡ್ಕರ್ ಅವರು ನಮಗೆ ಸಂವಿಧಾನವನ್ನು ಕೊಟ್ಟರು. ಆದರೆ ಈ ಮನುವಾದಿ ಆರ್‌ಎಸ್‌ಎಸ್ ಚಡ್ಡಿಗಳು ಮತ್ತು ಮೇಲ್ವರ್ಗದವರು ಈ ಸಂವಿಧಾನವನ್ನು ಈ ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದಾರೆ” ಎಂದು ತಿಳಿಸಿದರು.
“ಹೆಡೆಗೆವಾರು ಮತ್ತು ಗೋಳ್ವಲ್ಕರ್ ಸಂತತಿಗಳಾದ ಹಿಂದಿ ನಾಜಿ ಫ್ಯಾಸಿಸಂ ಕುತಂತ್ರಿಗಳು ಈ ಸಂವಿಧಾನವನ್ನು ವಿರೋಧಿಸುತ್ತ ಬರುತ್ತಿದ್ದಾರೆ. ಆದರೆ ಇಂದು ಮನುವಾದಿಗಳು ಫೆಬ್ರವರಿ 3ರಂದು ಜೀವವಿರೋಧಿ, ಸಮಾನತೆ ವಿರೋಧಿ, ಮಹಿಳಾ ಸ್ವತಂತ್ರ ವಿರೋಧಿ ಮತ್ತು ಅಸಮಾನತೆ ಬಿತ್ತುವ ಸಂವಿಧಾನದ ಹೆಸರಲ್ಲಿ ಧರ್ಮಶಾಸ್ತ್ರೀಯ ಎಂಬ ಪಟ್ಟಿ ಕಟ್ಟಿಕೊಂಡು ಮನುಸ್ಮೃತಿ ಜಾರಿ ಮಾಡಲು ಹೊರಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಕುಂಭಮೇಳದಲ್ಲಿ ಕಾಲ್ತುಳಿತ; ಕೂದಲೆಳೆ ಅಂತರದಲ್ಲಿ ಪಾರಾದ ಯುವಕರು
“ದೇಶವಿರೋಧಿ, ದೇಶದ್ರೋಹ ಚಟುವಟಿಕೆ ಮಾಡಲು ಹೊರಟಿರುವ ದೇಶದ್ರೋಹಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮನುಸ್ಮೃತಿ ಎಂಬ ಸಂವಿಧಾನವನ್ನು ಜಾರಿಗೆ ತರದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಮನವಿಗೆ ಸ್ಪಂದಿಸದಿದ್ದಲ್ಲಿ ಪ್ರಜಾಪ್ರಭುತ್ವವಾದಿಗಳು, ಬಾಬಾ ಸಾಹೇಬರ ಅನುಯಾಯಿಗಳು ಮತ್ತು ಪ್ರಗತಿಪರರು ಕೂಡಿಕೊಂಡು ದೇಶದಾದ್ಯಂತ ತೀವ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಕೆಎಸ್‌ಡಿಎಸ್‌ಎಸ್(ಕ್ರಾಂತಿಕಾರಿ) ಸುರಪುರ ಬಸವರಾಜ ದೊಡ್ಡಮನಿ ಶೆಳ್ಳಗಿ, ವಕೀಲರು ಹಾಗೂ ಮಲ್ಲಿಕಾರ್ಜುನ ಕೆ ತಳ್ಳಳ್ಳಿ ಸೇರಿದಂತೆ ಇತರರು ಇದ್ದರು.