ಬಾಯರಿಕೆಯಿಂದ ಹೊಂಡದಲ್ಲಿ ನೀರು ಕುಡಿಯಲು ಹೋಗಿದ್ದ ಮೂವರು ಕುರಿಗಾಹಿ ಸಹೋದರರು ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಅಚೋಲಾ ತಾಂಡದಲ್ಲಿ ನಡೆದಿದೆ.
ಮೃತರನ್ನು ಅಚೋಲಾ ತಾಂಡದ ಕೃಷ್ಣ ರಾಠೋಡ್ (10), ಜಯ ರಾಠೋಡ್ 14 ಹಾಗೂ ಅಮರ್ ರಾಠೋಡ್ (12) ಎಂದು ಗುರುತಿಸಲಾಗಿದೆ.
ಈ ಮೂವರು ಸಹೋದರಾಗಿದ್ದು, ಬೇಸಿಗೆ ರಜೆ ಇದ್ದ ಕಾರಣ ಪೋಷಕರ ಕೆಲಸದಲ್ಲಿ ನೆರವಾಗಲೆಂದು ಕುರಿ ಮೇಯಿಸಲು ಹೋಗಿದ್ದರು. ಮಧ್ಯಾಹ್ನ ಊಟದ ವೇಳೆಗೆ ಅವರು ಕೊಂಡೊಯ್ದಿದ್ದ ನೀರು ಬಿಸಿಲಿನ ತಾಪಕ್ಕೆ ಬಿಸಿಯಾಗಿತ್ತು. ಹೀಗಾಗಿ, ಹತ್ತಿರದಲ್ಲೇ ಇದ್ದ ಹೊಂಡದಲ್ಲಿ ತಣ್ಣನೆಯ ನೀರು ಇರುತ್ತದೆಂದು ಕುಡಿಯಲು ಹೋಗಿದ್ದಾರೆ. ಈ ವೇಳೆ, ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದು, ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಬಾಲಕರು ಬಿದ್ದು, ಮೃತಪಟ್ಟ ಹೊಂಡವನ್ನು ಕೋಳಿ ಫಾರ್ಮ್ ನಡೆಸುವ ಖಾಸಗಿ ಕಂಪನಿಯೊಂದು ಇತ್ತೀಚೆಗೆ ನಿರ್ಮಿಸಿತ್ತು. ಮಳೆ ಸುರಿದಿದ್ದರಿಂದ ಹೊಂಡದಲ್ಲಿ ನೀರು ನಿಂತಿದೆ. ಹೊಂಡದ ದಡವು ಇನ್ನೂ ಗಟ್ಟಿಯಾಗಿಲ್ಲದಿದ್ದ ಕಾರಣ, ಬಾಲಕರು ಕಾಲು ಇಡುತ್ತಿದ್ದಂತೆಯೇ ಜಾರಿದೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಯಾದಗಿರಿ ಗ್ರಾಮಾಂತರ ಠಾಣೆಯ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.