ಕೃಷ್ಣ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ ಲಿಮಿಟೆಡ್ (ಕೆಬಿಎಸ್) ಬ್ಯಾಂಕ್ ಸಿಬ್ಬಂದಿ ಸಾಲ ಮರುಪಾವತಿಸುವಂತೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಯಾದಗಿರಿ ತಾಲ್ಲೂಕಿನ ಯರಗೋಳ ಗ್ರಾಮದ ಮಹಿಳೆಯರು ಯಾದಗಿರಿ ಗ್ರಾಮೀಣ ಠಾಣೆಗೆ ಮನವಿ ಸಲ್ಲಿಸಿದ್ದು, ಕೆಬಿಎಸ್ ಬ್ಯಾಂಕ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ʼಕೃಷಿ ಕೂಲಿ ಕಾರ್ಮಿಕರಾದ ನಾವು ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡುತ್ತಿದ್ದೇವೆ. ಇನ್ನೂ ಒಂದಿಷ್ಟು ಸಾಲ ಬಾಕಿ ಇದೆ. ಆದರೆ ಸದ್ಯಕ್ಕೆ ಯಾವುದೇ ಕೆಲಸ ಇಲ್ಲದ ಕಾರಣ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದಕ್ಕೆ ಅವಕಾಶ ಕೊಡದ ಕೆಬಿಎಸ್ ಬ್ಯಾಂಕ್ ಸಿಬ್ಬಂದಿ ಪ್ರತಿದಿನ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆʼ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ʼಕೆಬಿಎಸ್ ಬ್ಯಾಂಕ್ ಫೈನಾನ್ಸ್ ಸಿಬ್ಬಂದಿ ಸಾಲಗಾರರ ಮನೆಗೆ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು, ಮನಸ್ಸಿಗೆ ಬೇಜಾರು ಮಾಡಿದ್ದಾರೆ. ಇದರಿಂದ ನಮ್ಮ ಜೀವಕ್ಕೆ ಏನಾದರೂ ಅನಾಹುತವಾದರೆ ಬ್ಯಾಂಕ್ ಸಿಬ್ಬಂದಿಯೇ ಕಾರಣರಾಗುತ್ತಾರೆ. ಕೂಡಲೇ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿʼ ಎಂದು ಕೋರಿದ್ದಾರೆ.
ಇದನ್ನೂ ಓದಿ : ಯಾದಗಿರಿ | ರೈತ ಹೋರಾಟಗಾರ ಚನ್ನಪ್ಪ ಆನೇಗುಂದಿ ಮೇಲೆ ದೂರು : ಪ್ರಾಂತ ರೈತ ಸಂಘ ಖಂಡನೆ
ಈ ಸಂದರ್ಭದಲ್ಲಿ ಶಾಣಮ್ಮ ಹನುಮಂತ, ನಿಂಗಮ್ಮ ನಿಂಗಪ್ಪ, ಮಲ್ಲಮ್ಮ ಚನ್ನಬಸಪ್ಪ, ಬಸಮ್ಮ ವೆಂಕಟೇಶ್, ಲಕ್ಷ್ಮೀ ರಾಮಣ್ಣ, ಪದ್ಮಾವತಿ, ಅನುಸಮ್ಮ, ನಾಗಮ್ಮ ಮಹಾದೇವಮ್ಮ , ನಾಗಮ್ಮ , ಪಾರ್ವತಿ , ನಾಗಮ್ಮ, ದೇವಿದ್ರಮ್ಮ, ಬಸಮ್ಮ ಮತ್ತಿತರರು ಇದ್ದರು.
ವರದಿ: ಸುಧೀರ್ ಕೋಟಿ