ಯಾದಗಿರಿ ತಾಲೂಕಿನ ಲಿಂಗೇರಿ ಗ್ರಾಮದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಲವಾರು ಸಮಸ್ಯೆಗಳಿವೆ. ಹಾಸ್ಟೆಲ್ಗೆ ವಿದ್ಯುತ್ ಸಂಪರ್ಕವೂ ಇಲ್ಲದೆ ವಿದ್ಯಾರ್ಥಿಗಳು ರಾತ್ರಿ ವೇಳೆ ಕತ್ತಲೆಯಲ್ಲಿ ಭಯದಲ್ಲಿಯೇ ಮಲಗುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದ್ದಾರೆ.
ಹಾಸ್ಟೆಲ್ಗೆ ಮಂಗಳವಾರ ಭೇಟಿ ನೀಡಿದ್ದ ಅವರು, “ಕೆಲವು ಪಾಲಕರು ತಮಗೆ ದೂರವಾಣಿಯಲ್ಲಿ ಸಂಪರ್ಕಿಸಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹಾಸ್ಟೆಲ್ನಲ್ಲಿ ನಾನಾ ರೀತಿಯ ಸಮಸ್ಯೆಗಳಿವೆ. ಆದರೂ, ವಾರ್ಡನ್ ಆಗಲೀ, ಸಂದಂಧಪಟ್ಟ ಇಲಾಖೆಯ ಅಧಿಕಾರಿಗಳಾಗಲೀ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಹಾಸ್ಟೆಲ್ಗೆ ಬರುವ ಅನುದಾನ ಎಲ್ಲಿಗೆ ಯಾರ ಜೇಬಿಗೆ, ಟಿಜೋರಿಗೆ ಸೇರಿತು ಎಂಬುದನ್ನು ಬಯಲುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಹಾಸ್ಟೆಲ್ನಲ್ಲಿ ಊಟದ ತಟ್ಟೆಗಳಿಲ್ಲ, ಚಹಾ ಲೋಟಗಳಿಲ್ಲ. ವೈದ್ಯಕೀಯ ತಪಾಸಣೆ ಇಲ್ಲ, ಶೌಚಾಲಯ ಸ್ವಚ್ಛತೆ ಇಲ್ಲ, ಚೆಂಬು ಇಲ್ಲ, ಬಕಿಟ್ ಇಲ್ಲ, ಆಟದ ಮೈದಾನ ಇಲ್ಲ, ಸೋಲಾರ್ ವಿದ್ಯುತ್ ಪರಿಕರಗಳು ಹಾಳಾಗಿದ್ದರೂ ರಿಪೇರಿ ಭಾಗ್ಯ ಕಂಡಿಲ್ಲ. ದಿನಪತ್ರಿಕೆಗಳು ಬರುತ್ತಿಲ್ಲ, ಇನ್ವರ್ಟರ್ ಹಾಳಾಗಿಹೋಗಿದೆ. ದುರಸ್ತಿಯಾಗಿಲ್ಲ, ಬಿಸಿನೀರು ಬರುತ್ತಿಲ್ಲ, ಚಟ್ನಿ ಗ್ರೆಡರ್ ಹಾಳಾಗಿದೆ. ಸಿಸಿ ಕೆಮೆರಾ ಹಾಳಾಗಿದೆ. ಲೈಟು, ಫ್ಯಾನ್ ಯಾವುದೂ ಇಲ್ಲ. ವಿಸತಿ ನಿಲಯದ ಊಟದ ಹಾಲ್ ನಲ್ಲಿ ಹಾಕಲಾಗಿರುವ ಎಲ್ಇಡಿ ಟಿವಿ ಕೆಟ್ಟು ಹಾಳಾಗಿದ್ದರೂ ದುರಸ್ತಿ ಮಾಡಿಸಿಲ್ಲ, ಕಟ್ಟಡದ ಕಿಟಕಿಗಳ ಗ್ಲಾಸ್ ಮತ್ತು ಮೆಸ್ ಕಿಟಕಿಯ ಜಾಲಿ ಹಾಳಾಗಿದೆ” ಎಂದು ಅವರು ಹೇಳಿದ್ದಾರೆ.
“ವಸತಿ ನಿಲಯದ ಅವ್ಯವಹಾರ ಬಯಲಾಗಬೇಕಾದರೆ ಜಿಲ್ಲಾ ಪಂಚಾಯಿತಿ ಸಿಇಓ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪಾಲಕರು ಮತ್ತು ಮಕ್ಕಳೊಂದಿಗೆ ಸಭೆ ನಡೆಸಿ ಚರ್ಚಿಸಬೇಕು” ಎಂದು ಹೇಳಿದರು.
“ತಿಂಗಳಿಗೊಮ್ಮೆ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಬೇಕು. ಆದರೆ ಇದುವರೆಗೆ ಎಷ್ಟು ಬಾರಿ ಭೇಟಿ ನೀಡಿದ್ದಾರೆ ಎಂಬುದರ ಮಾಹಿತಿ ಇಲ್ಲ. ಕೇವಲ ವಾರ್ಡನ್ಗಳ ಉಸ್ತುವಾರಿಗೆ ಬಿಟ್ಟು, ಸುಮ್ಮನೆ ಕೂರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
“ಮುಂದಿನ ಐದು ದಿನಗಳಲ್ಲಿ ಅಧಿಕಾರಿಗಳು ಹಾಸ್ಟೆಲ್ಗೆ ಭೇಟಿ ನೀಡಿ, ಸಮಸ್ಯೆ ಬಗೆಹರಿಸದಿದ್ದರೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು” ಎಂದು ಅವರು ಎಚ್ಚರಿಸಿದ್ದಾರೆ.