ಸಂವಿಧಾನದ ಆಶಯಗಳನ್ನು ಅರಿತುಕೊಂಡು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಯುವಜನರು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು ಎಂದು ಡಿಡಿಯು ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.
ನಗರದ ಡಿಡಿಯು ಶಾಲೆಯಲ್ಲಿ ಐಎಸ್‌ಐ ಬೆಂಗಳೂರು ಹಾಗೂ ಕನಸು, ಸರ್ವೋದಯ, ಸುಮಿತ್ ಮತ್ತು ಮೈರಾಡ್ ಟ್ರಸ್ಟ್‌ಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಮತ್ತು ನಾಗರಿಕತೆ’ ಕುರಿತ ಮೂರು ದಿನಗಳ ಯುವಜನರ ಸಾಮರ್ಥ್ಯವರ್ಧಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
“ನಮ್ಮ ವಿದ್ಯಾರ್ಥಿ ಜೀವನದಲ್ಲಿ ಸಂವಾದ, ತರಬೇತಿ ಹಾಗೂ ವ್ಯಕ್ತಿತ್ವ ವಿಕಸನದ ಶಿಬಿರಗಳು ಅಪರೂಪವಾಗಿದ್ದವು. ಆದರೆ, ಇಂದಿನ ಯುವಜನರಿಗೆ ಇಂತಹ ಅವಕಾಶಗಳು ದೊರೆಯುತ್ತಿರುವುದು ಸಂತಸದ ಸಂಗತಿ. ಶಿಬಿರದಲ್ಲಿ ಪಡೆದ ಜ್ಞಾನ ಮತ್ತು ಅರಿವನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಸಂವಿಧಾನದಲ್ಲಿನ ಮೀಸಲಾತಿ ವ್ಯವಸ್ಥೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ವಿವರಿಸಿದ ಅವರು, ವಿಶೇಷವಾಗಿ ಹಿಂದುಳಿದ ವರ್ಗಗಳಲ್ಲಿ ಮೀಸಲಾತಿ ಕುರಿತು ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ : ಬಳ್ಳಾರಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ; ಸರ್ವಾಧ್ಯಕ್ಷರಾಗಿ ಸಿ.ಜಿ.ಹಂಪಣ್ಣ ಆಯ್ಕೆ
ಸಂಪನ್ಮೂಲ ವ್ಯಕ್ತಿ ಡಾ.ಶ್ರೀನಿವಾಸ, ಐಎಸ್‌ಐ ರಾಜ್ಯ ಸಂಯೋಜಕ ಹಾಗೂ ವಕೀಲ ವಸಂತಕುಮಾರ್, ಕನಸು ಟ್ರಸ್ಟ್ ಅಧ್ಯಕ್ಷ ದೇವಿಂದ್ರ ಹುಲ್ಕಲ್, ಸರ್ವೋದಯ ಸಂಸ್ಥೆಯ ಮೋಹನಕುಮಾರ್ ಹೊಸಮನಿ, ಪ್ರಭಾಕರ್ ಹೊಸಮನಿ, ಸುಮಿತ್ ಸಂಸ್ಥೆಯ ಮಲ್ಲು ಅರಬೋಳ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.





