ಭಗತ್ ಸಿಂಗ್ ಅವರ ರಾಜಿರಹಿತ ಹೋರಾಟ, ಜ್ಞಾನದಾಹ ಯುವಜನರಿಗೆ ಮಾದರಿಯಾಗಿದೆ ಎಂದು ಎಐಡಿವೈಒ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್ ಹೇಳಿದರು.
ಯಾದಗಿರಿಯ ಜವಾಹರ್ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಅವರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಅತ್ಯಂತ ಚಿಕ್ಕ ವಯಸ್ಸಿನಲ್ಲಿ ನಗುನಗುತ್ತಾ ಗಲ್ಲಿಗೆ ಏರಿದ ಭಗತ್ ಸಿಂಗ್ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ. ಭಗತ್ ಸಿಂಗ್ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಜೀವನವನ್ನು ಮುಡಿಪಾಗಿಡುವ ನಿರ್ಧಾರ ಕೈಗೊಂಡರು” ಎಂದು ತಿಳಿಸಿದರು.
“ಭಗತ್ ಅವರ ತಂದೆ 16ನೇ ವಯಸ್ಸಿನಲ್ಲಿ ಅವರ ಮದುವೆ ಮಾಡಲು ಪ್ರಯತ್ನಿಸಿದರು. ಅದರಿಂದ ತಪ್ಪಿಸಿಕೊಂಡು ಮನೆಯನ್ನು ಮತ್ತು ತಮ್ಮ ಶಾಲಾ ಶಿಕ್ಷಣವನ್ನು ತ್ಯಜಿಸಿದರು. ಅತ್ಯಂತ ಜ್ಞಾನದಾಹಿಯಾಗಿದ್ದ ಅವರು ದೇಶ ವಿದೇಶದ ಇತಿಹಾಸ, ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯವನ್ನು ಅಧ್ಯಯನವನ್ನು ಆಳವಾಗಿ ನಡೆಸಿದರು. ಕೊನೆಗೆ ಗಲ್ಲಿಗೆ ಹಾಕುವ ದಿನವೂ ಸಹಿತ ಮಹಾನ್ ಕ್ರಾಂತಿಕಾರಿ ನಾಯಕ, ರಷ್ಯಾದ ಕ್ರಾಂತಿಯ ಶಿಲ್ಪಿ ಲೆನಿನ್ ಅವರ ಜೀವನ ಚರಿತ್ರೆಯನ್ನು ಓದುತ್ತಿದ್ದರು. ತಮ್ಮ ಜೀವನದ ಕೊನೆಯವರೆಗೂ ಬ್ರಿಟಿಷರ ವಿರುದ್ಧ ರಾಜಿ ರಹಿತ ಹೋರಾಟ ನಡೆಸಿದರು” ಎಂದರು.
“ದೇಶಕ್ಕೆ ಸ್ವಾತಂತ್ರ್ಯ ಪಡೆದರೆ ಸಾಲದು. ಮಾನವನಿಂದ ಮಾನವನಿಗೆ ಉಂಟಾಗುತ್ತಿರುವ ಶೋಷಣೆಗೆ ಕೊನೆ ಹಾಡಬೇಕು. ಹಾಗಾದರೆ ಮಾತ್ರ ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೆಂದು ಮನಗಂಡಿದ್ದರು. ಅದಕ್ಕಾಗಿ ಎಚ್‌ಆರ್‌ಎ ಎಂಬ ಸಂಘಟನೆಗೆ ಮರುನಾಮಕರಣ ಮಾಡಿ ಅದಕ್ಕೆ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂದು ಕರೆದರು” ಎಂದರು.
ಈ ಸುದ್ದಿ ಓದಿದ್ದೀರಾ? ಕಾವೇರಿ ವಿವಾದ | ಶಾಶ್ವತ ಪರಿಹಾರಕ್ಕೆ ಸುತ್ತೂರು ಸ್ವಾಮೀಜಿ ಸಲಹೆ
“ಜೈಲಿನಲ್ಲಿದ್ದಾಗ ಅವರ ತಂದೆ ಅವರನ್ನು ಉಳಿಸಲು ಪ್ರಯತ್ನ ನಡೆಸಿದ್ದನ್ನು ಒಪ್ಪದ ಭಗತ್ ಸಿಂಗ್ ನಗು ನಗುತ್ತಾ ಗಲ್ಲು ಕಂಬ ಏರಿದ ಧೀರರಾಗಿದ್ದಾರೆ. ಇಂತಹ ಮಹಾನ್ ಕ್ರಾಂತಿಕಾರಿಯ ಜೀವನ ಮತ್ತು ಹೋರಾಟ ನಮ್ಮ ಯುವಜನತೆಗೆ ಮಾದರಿಯಾಗಿದೆ” ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಧುಸೂದನ್ ರೆಡ್ಡಿ, ಹಿರಿಯ ಉಪನ್ಯಾಸಕ ನರಸರೆಡ್ಡಿ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.