ಯಮನೂರ ಉರುಸು | ಕೋಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ?!

Date:

Advertisements

ಯಮನೂರ ಪೀರ, ಚಾಂಗದೇವ, ರಾಜಾಬಾಗ ಸವಾರ್ ಹೆಸರಿನಿಂದ ಖ್ಯಾತಿ ಹೊಂದಿದ ಯಮನೂರ ಸಾಹೇಬರು ದುಡಿಯುವ ಮತ್ತು ಶ್ರಮಿಕ ವರ್ಗದ ಮನೆದೇವರಾಗಿರುವುದು ವಿಶೇಷ. ಆ ಹಿನ್ನೆಲೆಯಲ್ಲಿ ಯಮನೂರು ಪೀರನ ಉರುಸು ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಐದನೇ ದಿವಸಕ್ಕೆ ನಡೆಯುತ್ತದೆ. ಉತ್ತರ ಕರ್ನಾಟಕದ ಸಾವಿರಾರು ಶ್ರಮಿಕ ವರ್ಗದವರು ಯಮನೂರು ಗ್ರಾಮಕ್ಕೆ ಬಂದು ಚಾಂಗದೇವರ ದರ್ಶನ ಪಡೆದು ಹೋಗುವುದು ರೂಢಿಯಲ್ಲಿದೆ. ಉತ್ತರ ಕರ್ನಾಟಕ ಅಷ್ಟೇ ಅಲ್ಲದೆ ಕರ್ನಾಟಕ ಮತ್ತು ಅನ್ಯ ರಾಜ್ಯಗಳಿಂದಲೂ ಭಕ್ತರ ಸಂಖ್ಯೆ ಧಾವಿಸಿ ಬರುತ್ತದೆ. ಆಚರಣೆಗಳಲ್ಲಿ ವ್ಯತ್ಯಾಸ ಕಂಡುಬಂದರೂ ಆಚರಿಸುವವರ ಮನದ ಭಾವ ಒಂದೇಯಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಯಮನೂರು ಗ್ರಾಮ ಬಯಲು ಸೀಮೆಯ ಭೂಮಿಯಿಂದ ಕೂಡಿದೆ. ಈ ಸ್ಥಳದಲ್ಲಿ ಸಾವಿರಾರು ಎಮ್ಮೆಗಳು ಮೇಯುತ್ತಿದ್ದ ಕಾರಣ ಎಮ್ಮೆಹಟ್ಟಿ, ಎಮ್ಮಿಗನೂರು ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಮಾರ್ಕಂಡೇಯ ಮುನಿ ನಂತರದಲ್ಲಿ ಚಾಂಗದೇವ ಉರ್ಫ್ ರಾಜಾಬಾಗ ಸವಾರ್ ತಪಸ್ಸುಗೈದ ತಪೋಭೂಮಿ ಹಾಗೂ ಯಮನನ್ನು ಅಂದರೆ ಸಾವನ್ನು ಗೆದ್ದಿರುವ ಕಾರಣ ಯಮನೂರು ಎಂದು ಹೆಸರು ಬಂದಿರಬಹುದು ಎಂದು ಹೇಳಲಾಗಿದೆ. ಇನ್ನು ಈ ಗ್ರಾಮದ ಹೊರವಲಯದಲ್ಲಿ ಬೆಣ್ಣೆ ಹಳ್ಳ ಹಾದು ಹೋಗುತ್ತದೆ. ಆ ಬೆಣ್ಣೆ ಹಳ್ಳದ ನೀರು ಚರ್ಮರೋಗದಂತಹ ವ್ಯಾಧಿಗಳನ್ನು ಗುಣಪಡಿಸುವ ಔಷಧಿ ಗುಣವನ್ನು ಹೊಂದಿರುವುದರಿಂದ ಈ ಗ್ರಾಮಕ್ಕೆ ಯಮನೂರು ಎಂದು ಕರೆಯುತ್ತಾರೆ. ಯಾಮಿನ್ ಸೂಫಿ ಪಂಥದಲ್ಲಿ ಬಳಸುವ ಶಬ್ದವಾಗಿದ್ದು, ರೋಗವನ್ನು ನಿವಾರಿಸುವ ಶಕ್ತಿ ಇರುವುದಕ್ಕೆ ‘ಯಾಮಿನ್’ ಎಂದು ಕರೆಯುತ್ತಾರೆ. ಹೀಗಾಗಿ ಯಾಮಿನ್+ಊರು= ಯಾಮಿನ್ಊರು ಕ್ರಮೇಣವಾಗಿ ಯಮನೂರು ಅಂತ ಆಗಿರಬಹುದು.

ಯಮನೂರು ಹಿಂದೂ ಮುಸ್ಲಿಂ ಸಾಮರಸ್ಯವನ್ನು ಬಿತ್ತಿ ಬೆಳೆಸುವ ಧಾರ್ಮಿಕ ಕ್ಷೇತ್ರವಾಗಿ ಬೆಳೆದುಕೊಂಡಿದ್ದು ಇಲ್ಲಿಗೆ ಜಾತಿ ಧರ್ಮವನ್ನು ಲೆಕ್ಕಿಸದೆ ಎಲ್ಲ ಜನಾಂಗದವರು ಬಂದು ತಮ್ಮ ಬೇಡಿಕೆಗಳನ್ನು ಬೇಡಿಕೊಂಡು ಮೇಕೆ, ಕೋಳಿ ಎಂತಹ ಪ್ರಾಣಿ ಬಲಿಗಳನ್ನು ಕೊಡುವುದರ ಮೂಲಕ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಹಿಂದೂಗಳು ಮತ್ತು ಮುಸಲ್ಮಾನರು ಒಂದೇ ಕಡೆಗೆ ಚಾಂಗದೇವ ಮಹಾರಾಜಕೀ ಜೈ ಎಂದು ಕಾಯಿಯನ್ನೂ ಅರ್ಪಿಸುತ್ತಾರೆ. ರಾಜಾಬಾಗ ಸವಾರ್ ಕೀ ದೋಸ್ತರ ಹೋ ದೀನ್ ಎಂದು ಸಕ್ಕರೆ ಓದಿಸುವ ಮೂಲಕ ಫಾತೇಹಾ ಮಾಡಿಸುವ ರೂಢಿಯು ಇಂದಿಗೂ ಚಾಲ್ತಿಯಲ್ಲಿ ನಡೆದು ಬಂದಿದೆ. ರಾಜಾಬಾಗ ಸವಾರ ಅಂದರೆ; ಹುಲಿಯ ಮೇಲೆ ಸವಾರಿ ಹೊರಟವರು ಎಂದರ್ಥವಾಗುತ್ತದೆ. ಈ ಕ್ಷೇತ್ರದಲ್ಲಿ ಯಮನೂರು ಸಾಹೇಬರ ದೇವಸ್ಥಾನ ಮತ್ತು ದರ್ಗಾ (ಮಸೀದಿ) ಒಟ್ಟಿಗೆ ಇರುವುದನ್ನು ಕಾಣಬಹುದು. ಈ ಮೂಲಕ ಚಾಂಗದೇವರು ಉರ್ಫ್ ಯಮನೂರು ಸಾಹೇಬರು ಶ್ರಮಿಕ ವರ್ಗದ ದೈವವಾಗಿ ಪರಿವರ್ತನೆಯಾಗಿದ್ದು ವಿಶೇಷ ಎಂದೆ ಹೇಳಬಹುದು.

Advertisements

ಇನ್ನು ಯಮನೂರು ಪೀರನ ಮಸೀದಿ ಅಥವಾ ದೇವಸ್ಥಾನದಲ್ಲಿ ಪಂಜಾಗಳು ಅಂದರೆ ಅಲೈದೇವರು ಇರುವುದನ್ನು ಕಾಣಬಹುದು. ಈ ಪಂಜಾಗಳನ್ನು ಮೈಸೂರು ಹುಲಿ ಟಿಪ್ಪು ಸುಲ್ತಾನ್ ತಂದಿಟ್ಟಿರಬಹುದು ಎನ್ನಲಾಗಿದ್ದು, ಬಿಜಾಪುರದ ಆದಿಲ್’ಶಾಹಿಗಳ ಕಾಲದಲ್ಲಿ ಸುಲ್ತಾನರು ಇಲ್ಲಿಗೆ ನಡೆದುಕೊಳ್ಳುತ್ತಿದ್ದರು. ಟಿಪ್ಪು ಸುಲ್ತಾನ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ಕೂಡ ಇಲ್ಲಿಗೆ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇನ್ನೂ ವಿಶೇಷವೇನೆಂದರೆ ವಾಹನಗಳು ಬಂದಿರುವ ಈ ಕಾಲಘಟ್ಟದಲ್ಲಿಯೂ ಕುದುರೆ ಗಾಡಿ ಅರ್ಥಾತ್ ಟಾಂಗಾಗಳು ಇವತ್ತಿಗೂ ಚಾಲ್ತಿಯಲ್ಲಿರುವುದನ್ನು ಯಮನೂರಿನಲ್ಲಿ ಕಾಣಬಹುದು. ಕೋಮುವಾದಿಗಳು ಜನರ ಮನಸ್ಸಿನಲ್ಲಿ ಕೋಮುವಾದವನ್ನು ಸೃಷ್ಟಿಸಿ ಜಾತಿ ಸಂಘರ್ಷಗಳನ್ನು ಸೃಷ್ಟಿ ಮಾಡುವಲ್ಲಿ ಅದಷ್ಟೇ ಮುಂದಾಗಿದ್ದರೂ, ಅವರ ಪ್ರಯತ್ನಗಳು ವಿಫಲವಾಗುತ್ತವೆ ಎನ್ನುವುದಕ್ಕೆ ಯಮನೂರಿನ ಉರುಸು ಸಾಕ್ಷಿಯಾಗಿದೆ. ಇಂತಹ ಸಾಮರ್ಥ್ಯದ ಜಾತ್ರಾ ಅಥವಾ ಉರುಸುಗಳಿಂದಾದರೂ ಕೋಮುವಾದಿಗಳು ಬುದ್ಧಿ ಕಲಿಯುತ್ತಾರೆ ಎಂಬುದು ಪ್ರಶ್ನೆಯಾಗಿದೆ.

ಉರುಸಿನ ಸಂದರ್ಭದಲ್ಲಿ ಯಮನೂರು ಗ್ರಾಮದ ಜನರು ನಾಡಿನ ಉದ್ದಗಲದಿಂದಲೂ ಚಾಂಗದೇವರ ದರ್ಶನಕ್ಕೆ ಬಂದ ಭಕ್ತರಿಗೆ ಸ್ಥಳಾವಕಾಶವನ್ನು ತಮ್ಮ ತಮ್ಮ ಮನೆಗಳಲ್ಲೇ ಅವಕಾಶ ಕಲ್ಪಿಸಿ ಕೊಡುತ್ತಾರೆ. ಜಾತಿ ಮತಗಳನ್ನು ಎಣಿಸದೆ ಜಾತ್ರೆಯ ಸಂದರ್ಭದಲ್ಲಿ ಜನರಿಗೆ ಇರಲು ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ನಾವು ಮುಸಲ್ಮಾನರಾಗಿದ್ದರೂ ನಮ್ಮನ್ನು ಯಾವ ಜಾತಿ, ಧರ್ಮದವರೆಂದು ಈ ಗ್ರಾಮದಲ್ಲಿ ಯಾರು ಪ್ರಶ್ನಿಸುವುದಿಲ್ಲ. ಅವರು ಲಿಂಗಾಯತರಾಗಿದ್ದರೂ ನಮ್ಮೊಂದಿಗೆ ಸಾಮರಸ್ಯದಿಂದಿದ್ದು ನಮಗೆ ಇರಲು ಅವಕಾಶ ಮಾಡಿಕೊಡುತ್ತಾರೆ. ನೀರು ಕೊಡುತ್ತಾರೆ, ನಾವು ಅಡುಗೆ ಅಡುಗೆ ಮಾಡಿಕೊಳ್ಳಲು ಪಾತ್ರೆಗಳನ್ನೂ ನೀಡುತ್ತಾರೆ ಎಂದು ದೂರದಿಂದ ವರ್ಷಕ್ಕೊಮ್ಮೆ ದರ್ಶನಕ್ಕೆಂದು ಬಂದಿರುವ ಜನರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉರುಸು ಅಥವಾ ಜಾತ್ರಾ ಸಂದರ್ಭದ ಎರಡು ದಿನಗಳು ಇಡೀ ಊರಿಗೆ ಊರಿನ ಜನರೇ ಬೇರೆ ಕಡೆಯಿಂದ ಬರುವ ಜನರನ್ನು ತಮ್ಮ ಬಂಧು, ಬಾಂಧವರಂತೆ ನೋಡಿಕೊಳ್ಳುತ್ತಾರೆ.

ಚಾಂಗದೇವರು ಯೋಗಿ ಚಕ್ರವರ್ತಿ ಆಗಿದ್ದರು. ಅವರ ಮತ್ತು ಸಂತ ಜ್ಞಾನೇಶ್ವರರ ನಡುವೆ ವಾಗ್ವಾದ ನಡೆಯುತ್ತದೆ. ತದನಂತರ ಚಾಂಗದೇವರ ಅಹಂಕಾರ ಶಮನವಾಗಿ ಸಿದ್ಧ ಮತ್ತು ಸೂಫಿ ಪರಂಪರೆ ಎರಡರ ತತ್ವಗಳಿಂದ ಮುಂದುವರೆಯುತ್ತಾರೆ. ಇದರಿಂದ ಇಂದಿಗೂ ಉತ್ತರ ಕರ್ನಾಟಕದಲ್ಲಿ ಅಲಾವಿ ಹಬ್ಬದ ಸಂದರ್ಭದಲ್ಲಿ ಪಂಜಾ ರೂಪದಲ್ಲಿಯೂ ರಾಜಾಬಾಗ ಸವಾರ’ರನ್ನು ಆರಾಧಿಸುತ್ತಾರೆ. ಮೊಹರಂ ಸಮಯದಲ್ಲಿ ಯಮನೂರ ಪೀರನ ಹೆಸರಿನಲ್ಲಿ ಕೆಂಡ ಹಾಯುವುದು, ಕಂದೂರಿ ಮಾಡುವ ರೂಢಿಯಿದೆ. ಅವರ ಮೂಲ‌ ಮತ್ತು ಚರಿತ್ರೆ ಏನೇ ಇರಲಿ. ಜಗತ್ತಿಗೆ ಶಾಂತಿ ಪಾಠ ಹೇಳಿದ ಮತ್ತು ಭಾವೈಕ್ಯತೆಯ ಬುನಾದಿ ಹಾಕಿದ ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಮರಸ್ಯವು ಅಳಿವಿನ ಅಂಚಿನಲ್ಲಿದೆ. ಹೀಗಾಗಿ ಎಲ್ಲರೂ ಜಾತಿ, ಮತ ಮರೆತು ವಿವಿಧ ಆಚರಣೆಗಳನ್ನು ಒಟ್ಟುಗೂಡಿಸಿಕೊಂಡು ಹೋಗುವ ಸಂಸ್ಕೃತಿಯಿಂದ, ಇಂತಹ ಕ್ರೂಡಿಕರಣ ಆಚರಣೆಗಳಿಂದ ಸಾಮರಸ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬಹುದು. ಏಕೆಂದರೆ; ಕೋಮುವಾದ, ಜಾತಿಯತೆಯು ಈ ನೆಲಕ್ಕೆ ಒಪ್ಪುವುದಿಲ್ಲ.

ಹುಬ್ಬಳ್ಳಿ ಮತ್ತು ವಿಜಯಪುರ ಮುಖ್ಯ ರಸ್ತೆಯಲ್ಲಿ ಬರುವ ಈ ಯಮನೂರು ಗ್ರಾಮವು ಅಭಿವೃದ್ಧಿಯಲ್ಲಿ ಶೂನ್ಯ ಎಂದೇ ಹೇಳಬಹುದು. ಗ್ರಾಮದಲ್ಲಿ ಚರಂಡಿಗಳು ಇಲ್ಲದಿರುವುದು, ರಸ್ತೆಗಳು ಸರಿ ಇಲ್ಲದಿರುವುದು ಮತ್ತು ಪ್ರವಾಸಿಗರು‌ ಉಳಿದುಕೊಳ್ಳಲು ನಿವಾಸ ಸ್ಥಳಗಳ ನಿರ್ಮಾಣ ಮುಖ್ಯವಾಗಿದೆ. ಈ ಬಗ್ಗೆ ಸರ್ಕಾರವು ಗಮನಹರಿಸಿ ಅಭಿವೃದ್ಧಿಗೊಳಿಸುವಲ್ಲಿ ಮುಂದಾಗಬೇಕಿದೆ. ಇನ್ನು ಬೆಣ್ಣೆ ಹಳ್ಳವು ಭಕ್ತರು ಬಿಸಾಕುವ ಬಟ್ಟೆಗಳಿಂದ ಕೂಡಿ, ನೀರು ಕಲುಷಿತಗೊಂಡು, ಗಲೀಜು ವಾತಾವರಣ ಸೃಷ್ಟಿಯಾಗಿದೆ. ಇತ್ತ ಪರಿಸರ ಸಂರಕ್ಷಣೆ ಬಗ್ಗೆಯೂ ಸಂಭಂಧಪಟ್ಟ ಇಲಾಖೆ ಗಮನಹರಿಸಬೇಕಿದೆ. ಏನೇಯಾದರೂ ಯಮನೂರು ಪೀರನ ಜಾತ್ರಾ ಮತ್ತು ಉರುಸು ಜಾತಿಯತೆಗೆ ಚಾಟಿಏಟು ಬೀಸಿದ್ದು, ಇಂತಹ ಭಾವೈಕ್ಯತಾ ಉರುಸುಗಳಿಂದ ಕೊಮುವಾದಿಗಳು ಇನ್ನಾದರೂ ಸಾಮರಸ್ಯದ ಪಾಠ ಕಲಿಯುತ್ತಾರ? ಎಂಬುದು ಯಮನೂರ ಸಾಹೇಬರ ಭಕ್ತರ ಆಶಯವಾಗಿದೆ.

WhatsApp Image 2024 09 06 at 11.32.31 a95e9ba6
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X