ನೀವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಗಂಡು- ಹೆಣ್ಣು ಜೊತೆಗೆ ನಮ್ಮ ಲೈಂಗಿಕ ಅಲ್ಪಸಂಖ್ಯಾತರು ಕೂಡ ಇದ್ದಾರೆ. ನೀವು ನಮ್ಮೆಲ್ಲರ ಶಾಸಕರು ಆಗಿದ್ದು ಸಮಾಜದ ಒಂದು ಭಾಗವಾದ ನಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿ, ಹಾಸ್ಯಾಸ್ಪದ, ಉಡಾಫೆ ಮತ್ತು ಮಕ್ಕಳಾಟದ ಬಾಲಿಶವಾದ ಹೇಳಿಕೆ ಕೊಡುವುದು ಸರಿಯೇ?
ಮಾನ್ಯ ಶಾಸಕ ಯಶ್ಪಾಲ್ ಸುವರ್ಣ ಅವರೇ,
ಇತ್ತೀಚಿನ ರಾಜಕೀಯ ನಾಯಕರ ಬಾಯಲ್ಲಿ ಟ್ರಾನ್ಸ್ ಜೆಂಡರ್ (ಲಿಂಗತ್ವ ಅಲ್ಪಸಂಖ್ಯಾತರು) ಸಮುದಾಯದ ಕುರಿತಾದ ಅವಹೇಳನಕಾರಿಯಾದ ಹೇಳಿಕೆಗಳು ಸರ್ವೇಸಾಮಾನ್ಯವಾಗಿವೆ. ನಮ್ಮ ಹಕ್ಕುಗಳು, ನಮ್ಮ ಉದ್ಯೋಗ, ನಮ್ಮ ಕುಟುಂಬ ಮತ್ತು ವಿವಾಹ, ಮೀಸಲಾತಿ ಯಾವುದೇ ವಿಷಯಗಳ ಬಗ್ಗೆ ಯೋಚಿಸದ ನೀವು, ನಿಮ್ಮ ರಾಜಕೀಯ ಭಾಷಣಗಳಲ್ಲಿ ನಮ್ಮನ್ನು ಕ್ಷುಲ್ಲಕವಾಗಿ ಬಳಸಿಕೊಳ್ಳುವುದು ಲಿಂಗ ತಾರತಮ್ಯದ ಪರಮಾವಧಿಯಾಗಿದೆ.
ನೀವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಗಂಡು-ಹೆಣ್ಣು ಜೊತೆಗೆ ನಮ್ಮ ಲೈಂಗಿಕ ಅಲ್ಪಸಂಖ್ಯಾತರು ಕೂಡ ಇದ್ದಾರೆ. ನೀವು ನಮ್ಮೆಲ್ಲರ ಶಾಸಕರು ಆಗಿದ್ದು ಸಮಾಜದ ಒಂದು ಭಾಗವಾದ ನಮ್ಮ ಸಮುದಾಯದ ಬಗ್ಗೆ ಅವಹೇಳನಕಾರಿ, ಹಾಸ್ಯಾಸ್ಪದ, ಉಡಾಫೆ ಮತ್ತು ಮಕ್ಕಳಾಟದ ಬಾಲಿಶವಾದ ಹೇಳಿಕೆ ಕೊಡುವುದು ಸರಿಯೇ?
ಲಿಂಗತ್ವ ಅಲ್ಪಸಂಖ್ಯಾತರು ಅಂದರೆ ಯಾರು?
ಈ ಸಮುದಾಯದ ವೈವಿಧ್ಯತೆಗಳೇನು?
ಈ ಸಮುದಾಯದ ಹಿನ್ನೆಲೆ ಏನು?
ಅವರು ಲಿಂಗ ಪರಿವರ್ತನೆ ಏಕೆ ಮಾಡಿಕೊಳ್ಳುತ್ತಾರೆ?
ಲಿಂಗ ಪರಿವರ್ತನೆ ಆಗುವಾಗ ಮತ್ತು ನಂತರದ ಕಷ್ಟ ನಷ್ಟಗಳು ನಿಮಗೆ ಗೊತ್ತೇ?
ಎಷ್ಟೆಲ್ಲಾ ಖರ್ಚು ಮತ್ತು ಕಷ್ಟಗಳಿದ್ದರೂ ಕೂಡ ಲಿಂಗ ಪರಿವರ್ತನೆ ಆಗುತ್ತಾರೆ ಎಂದರೆ ಅದು ಮಕ್ಕಳ ಆಟವೇ?
ಒಂದು ವೇಳೆ ಲಿಂಗ ಪರಿವರ್ತನೆ ಆಗುವುದು ನಿಮ್ಮ ಮತ್ತು ನಿಮ್ಮ ಬೆಂಬಲಿಗರ ಪ್ರಕಾರ ಮಕ್ಕಳ ಆಟವಾದರೆ, ನೀವು ಯಾಕೆ ಇನ್ನೂ ಲಿಂಗ ಪರಿವರ್ತನೆ ಆಗಿಲ್ಲ?
ನೀವೂ ಲಿಂಗ ಪರಿವರ್ತನೆ ಆಗಬಹುದಲ್ಲ? ಹೋಗಲಿ ನಿಮ್ಮ ಮಕ್ಕಳಿಗೆ ಲಿಂಗ ಪರಿವರ್ತನೆ ಮಾಡಿಸಬಹುದಲ್ಲವೇ?
ಈ ಕುರಿತು ನಿಮಗೇನು ಗೊತ್ತಿಲ್ಲ ಅಂದರೆ ತಿಳಿಯದ ವಿಷಯದ ಬಗ್ಗೆ ಇಷ್ಟು ಲಘುವಾದ ಹೇಳಿಕೆ ಹೇಗೆ ಕೊಟ್ಟಿದ್ದೀರಿ?
ಸಮಾಜದಲ್ಲಿ ಶೋಷಿತರಲ್ಲೇ ಶೋಷಿತರಾಗಿರುವ, ಅಂಚಿಗೆ ತಳ್ಳಲ್ಪಟ್ಟಿರುವ ಒಂದು ಸಮುದಾಯದ ಕುರಿತು ಈ ರೀತಿಯ ಹಗುರ ಹೇಳಿಕೆಯನ್ನು ಕೊಟ್ಟಿದ್ದೀರಿ ಎಂದರೆ ನಿಮ್ಮಲ್ಲಿ ಯಾವುದೇ ಮಾನವೀಯ ಮತ್ತು ನೈತಿಕ ಮೌಲ್ಯಗಳು ಉಳಿದಿಲ್ಲ ಎಂದು ತೀರ್ಮಾನಿಸಬಹುದಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಅಂದರೆ ಯಾರು? ಲಿಂಗ ಪರಿವರ್ತನೆ ಏಕೆ ಮಾಡಿಸಿಕೊಳ್ಳುತ್ತಾರೆ? ನಮ್ಮ ಜೀವನದ ಸಾಧಕ ಬಾಧಕಗಳು ಏನು ಎಂದು ಬನ್ನಿ ನಾವು ಹೇಳುತ್ತೇವೆ. ನಮ್ಮ ವಿಚಾರಗಳು ಮತ್ತು ಹೇಳಿಕೆಗಳು ವೈಜ್ಞಾನಿಕತೆ ಮತ್ತು ವೈಚಾರಿಕತೆಗಳನ್ನು ಒಳಗೊಂಡಿರಬೇಕು. ಇನ್ನು ಮುಂದೆ ಯಾವುದೇ ವಿಷಯವಾಗಿರಲಿ ಪೂರ್ವಾಪರ ವಿಚಾರ ಮಾಡಿ ಸಂಪೂರ್ಣವಾಗಿ ತಿಳಿದುಕೊಂಡು ಮಾತನಾಡಿ. ನಮ್ಮ ಸಮುದಾಯದ ಕುರಿತು ನೀವು ಮಾಡಿದ ಈ ತಪ್ಪಿಗಾಗಿ ತಕ್ಷಣವೇ ಬೇಷರತ್ತಾಗಿ ನಮ್ಮ ಸಮುದಾಯಕ್ಕೆ ಕ್ಷಮೆಯನ್ನು ಕೇಳಲೇಬೇಕು.
-ಒಂದೆಡೆ, ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳು ಸಂಸ್ಥೆ