ಯಲ್ಲಾಪುರದ ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋಗಿ ಭಾನುವಾರದಂದು ಕವಲಗಿ ಹಳ್ಳದಲ್ಲಿ ಕೊಚ್ಚಿಹೋಗಿದ್ದ ಇಬ್ಬರು ಸಹೋದರರ ಪೈಕಿ ಓರ್ವನ ಶವ ಪತ್ತೆಯಾಗಿದೆ. ಮತ್ತೊಬ್ಬನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾದನಸರದ ನಿವಾಸಿಗಳಾದ ರಫೀಕ್ ಇಬ್ರಾಹಿಂ ಸಾಬ್ ಸೈಯದ್(27) ಮತ್ತು ಆತನ ಸಹೋದರ ಮಹ್ಮದ್ ಹನೀಫ್ ಇಬ್ರಾಹಿಂ ಸೈಯದ್(25) ಭಾನುವಾರ ಬೇಡ್ತಿ ನದಿಯಲ್ಲಿ ಮೀನು ಹಿಡಿದು ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ, ಕವಲಗಿ ಹಳ್ಳವನ್ನು ದಾಟುವಾಗ ನೀರಿನ ರಭಸಕ್ಕೆ ಸಿಲುಕಿ ಇಬ್ಬರೂ ಕೊಚ್ಚಿಹೋಗಿದ್ದರು.
ಸ್ಥಳೀಯರು, ಅಧಿಕಾರಿಗಳು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಯೋಗದೊಂದಿಗೆ ತಕ್ಷಣವೇ ಶೋಧ ಕಾರ್ಯ ಆರಂಭಿಸಿದ್ದರು. ಸೋಮವಾರ ಮಧ್ಯಾಹ್ನ, ಯುವಕರು ಕೊಚ್ಚಿಹೋದ ಸ್ಥಳದಿಂದ ಸುಮಾರು 300 ಮೀಟರ್ ದೂರದಲ್ಲಿ ಹಿರಿಯ ಸಹೋದರ ರಫೀಕ್ ಇಬ್ರಾಹಿಂ ಸಾಬ್ ಸೈಯದ್ ಅವರ ಮೃತದೇಹ ಪತ್ತೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಮಳವಳ್ಳಿ | ತಳಗವಾದಿ ಗ್ರಾಮಕ್ಕೆ ಮೂಲಸೌಕರ್ಯ ಮರೀಚಿಕೆ: ಜನಪ್ರತಿನಿಧಿಗಳ ನಿರ್ಲಕ್ಷ್ಯ
ಕಿರಿಯ ಸಹೋದರ ಮಹ್ಮದ್ ಹನೀಫ್‌ಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿವೈಎಸ್‌ಪಿ ಗೀತಾ ಪಾಟೀಲ್, ಸಿಪಿಐ ರಮೇಶ ಹಾನಾಪುರ, ಪಿಎಸ್‌ಐಗಳಾದ ಯಲ್ಲಾಲಿಂಗ ಕುನ್ನೂರು, ಸಿದ್ದಪ್ಪ ಗುಡಿ ಹಾಗೂ ಸಿಬ್ಬಂದಿ ವರ್ಗ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.