ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನಿಸಲಾಗಿದೆ ಎಂಬ ವದಂತಿ ಯಲ್ಲಾಪುರ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರೆ–ಜೋಗಾಳಕೇರಿ ಭಾಗದಲ್ಲಿ ವ್ಯಾಪಕವಾಗಿ ಹರಡಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಸ್ಥಳ ಪರಿಶೀಲನೆ ಹಾಗೂ ಸಮಗ್ರ ವಿಚಾರಣೆ ನಡೆಸಿದ ಪೊಲೀಸರು, ಯಾವುದೇ ಅಪಹರಣ ಯತ್ನ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಜೋಗಾಳಕೇರಿಯ ಐವರು ಮಕ್ಕಳು ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ವೇಳೆ, ಸಮೀಪದ ಪ್ರವಾಸಿ ತಾಣಕ್ಕೆ ಬಂದಿದ್ದ ಕೆಲ ಅಪರಿಚಿತರು ಅವರೊಂದಿಗೆ ಮಾತನಾಡಲು ಮುಂದಾಗಿದ್ದಾರೆ. ಮಳೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳನ್ನು ಕಾರಿನಲ್ಲಿ ಮನೆಗೆ ಬಿಟ್ಟುಬರುವುದಾಗಿ ಅವರು ಹೇಳಿದ್ದರಿಂದ ಮಕ್ಕಳು ಹೆದರಿಕೊಂಡು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಘಟನೆಯ ಬಳಿಕ, ಮಕ್ಕಳನ್ನು ಅಪಹರಿಸಲು ಯತ್ನಿಸಲಾಗಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸಾರ್ವಜನಿಕರ ನಡುವೆ ವೇಗವಾಗಿ ಹರಡಿದೆ.
ಈ ಸುದ್ದಿ ಓದಿದ್ದೀರಾ? ದಾಂಡೇಲಿ | ‘ಮೇವಾ ಮೋದಕ್’ ಹೆಸರಿನಲ್ಲಿ ಮಾದಕ ವಸ್ತು ಮಾರಾಟ ಆರೋಪ; ಪೊಲೀಸ್ ದಾಳಿ, 1.986 ಕೆ.ಜಿ. ವಸ್ತು ಜಪ್ತಿ
ಈ ಸಂಬಂಧ ಬೀಟ್ ಪೊಲೀಸ್ ಸಿಬ್ಬಂದಿ ಕರ್ಣಕುಮಾರ ಹಾಗೂ ಶಿಕ್ಷಣ ಇಲಾಖೆಯ ಪ್ರಭಾಕರ ಭಟ್ಟ ಅವರು ಶನಿವಾರ ಶಾಲೆಗೆ ಭೇಟಿ ನೀಡಿ, ಶಿಕ್ಷಕರು, ಪಾಲಕರು ಮತ್ತು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸಿ, ಪ್ರತಿಯೊಬ್ಬರಿಂದ ಮಾಹಿತಿ ಸಂಗ್ರಹಿಸಿದ ಬಳಿಕ, ಇದು ಅಪಹರಣ ಯತ್ನವಲ್ಲ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ, ಆ ಭಾಗದ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಪರಿಚಿತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸೂರ್ಯ ಕಲ್ಯಾಣಿ ಗುಡ್ಡ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಲ್ಲದೆ, ಮದ್ಯದ ಅಮಲಿನಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, “ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು. ಮಕ್ಕಳನ್ನು ಸಾಧ್ಯವಾದಷ್ಟು ಒಂಟಿಯಾಗಿ ಶಾಲೆಗೆ ಕಳುಹಿಸದೆ, ಪಾಲಕರು ಅಥವಾ ಹಿರಿಯರೊಂದಿಗೆ ಕಳುಹಿಸುವುದು ಸುರಕ್ಷಿತ” ಎಂದು ಸಲಹೆ ನೀಡಿದ್ದಾರೆ.





