“ನಾನು ಓಮನ್ನಲ್ಲಿ ಸಿಲುಕಿಕೊಂಡಿದ್ದೇನೆ. ಮನೆಯೊಂದರಲ್ಲಿ ಮನೆಕೆಲಸ ಮಾಡುತ್ತಿದ್ದೇನೆ. ಇಲ್ಲಿ ಅಮಾನವೀಯ ಹಿಂಸೆ, ದುಡಿಮೆಯ ಶೋಷಣೆ ಹಾಗೂ ವೇತನ ವಂಚನೆಗೆ ಒಳಗಾಗಿದ್ದೇನೆ” ಎಂದು ತೆಲಂಗಾಣದ ಹೈದರಾಬಾದ್ ಮೂಲದ ಯುವತಿಯೊಬ್ಬರು ಆರೋಪಿಸಿದ್ದಾರೆ. ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ತಾವು ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದು, ತಮ್ಮನ್ನು ಭಾರತಕ್ಕೆ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹೈದರಾಬಾದ್ನ ಶಬ್ನಂ ಬೇಗಂ ಅವರು ಸ್ಥಳೀಯ ಉದ್ಯೋಗ ಏಜೆಂಟ್ ಒಬ್ಬರ ಮೂಲಕ ಮನೆಕೆಲಸದ ಉದ್ಯೋಗ ಸಿಗುತ್ತದೆ ಎಂಬ ಭರವಸೆಯಲ್ಲಿ ಮಾರ್ಚ್ 26ರಂದು ಒಮಾನ್ನ ಮಸ್ಕತ್ಗೆ ತೆರಳಿದ್ದರು. ತಿಂಗಳಿಗೆ 200 ಒಮಾನಿ ರಿಯಾಲ್ (ಸುಮಾರು 50 ಸಾವಿರ ರೂ.) ವೇತನ ನೀಡುವುದಾಗಿ ತಮಗೆ ಭರವಸೆ ನೀಡಲಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, “ಮಸ್ಕತ್ಗೆ ತಲುಪಿದ ಬಳಿಕ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ದಿನಕ್ಕೆ 12ರಿಂದ 15 ಗಂಟೆಗಳವರೆಗೆ ವಿವಿಧ ಮನೆಗಳಲ್ಲಿ ಕೆಲಸ ಮಾಡಿಸಲಾಯಿತು. ನಾಲ್ಕು ತಿಂಗಳಾದರೂ ಯಾವುದೇ ವೇತನ ನೀಡಲಿಲ್ಲ. ಸಮರ್ಪಕ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನೂ ಕಲ್ಪಿಸಲಿಲ್ಲ. ಒಂದೂವರೆ ತಿಂಗಳ ಕಾಲ ಮೊಬೈಲ್ ಫೋನ್ ಬಳಸಲು ಅವಕಾಶ ನೀಡಲಿಲ್ಲ” ಎಂದು ಅವರು ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಅಲ್ಲದೆ, ತಮ್ಮ ಮೇಲೆ ಹಲ್ಲೆ ನಡೆಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಶಬ್ನಂ ಆರೋಪಿಸಿದ್ದಾರೆ. ಪರಿಸ್ಥಿತಿ ಸಹಿಸಲಾಗದೆ ಉದ್ಯೋಗದಾತರ ಮನೆಯಿಂದ ತಪ್ಪಿಸಿಕೊಂಡು ಮಸ್ಕತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಲುಪಿದ್ದೇನೆಂದು ತಿಳಿಸಿದ್ದಾರೆ.
ಆದರೆ, ತಮ್ಮ ಪಾಸ್ಪೋರ್ಟ್ ಅನ್ನು ನೇಮಕಾತಿ ಏಜೆಂಟ್ಗಳು ವಶಪಡಿಸಿಕೊಂಡಿದ್ದಾರೆ. ನನ್ನನ್ನು ಸುರಕ್ಷಿತವಾಗಿ ಹೈದರಾಬಾದ್ಗೆ ಕರೆದೊಯ್ಯಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಶಬ್ನಂ ಅವರು ಕಳುಹಿಸಿದ ವಿಡಿಯೋವನ್ನು ಹೈದರಾಬಾದ್ನ ಮಜ್ಲಿಸ್ ಬಚಾವೊ ತೆಹ್ರೀಕ್ (MBT) ನಾಯಕ ಅಮ್ಜದ್ ಉಲ್ಲಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯ ಕುಟುಂಬವು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಮನವಿ ಸಲ್ಲಿಸಿದ್ದು, ಮಸ್ಕತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಮಧ್ಯಪ್ರವೇಶಿಸಿ ಅವರ ಸುರಕ್ಷತೆ ಮತ್ತು ಭಾರತಕ್ಕೆ ವಾಪಸಾತಿಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಸ್ಕತ್ನ ಭಾರತೀಯ ರಾಯಭಾರ ಕಚೇರಿ, ಪ್ರಕರಣದ ಬಗ್ಗೆ ಗಮನ ಹರಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಇನ್ನು, ಸುಳ್ಳು ಭರವಸೆ ನೀಡಿ ಮಹಿಳೆಯನ್ನು ವಿದೇಶಕ್ಕೆ ಕಳುಹಿಸಿದ ಆರೋಪ ಎದುರಿಸುತ್ತಿರುವ ಉದ್ಯೋಗ ಏಜೆಂಟ್ ವಿರುದ್ಧವೂ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಮ್ಜದ್ ಉಲ್ಲಾ ಖಾನ್ ಆಗ್ರಹಿಸಿದ್ದಾರೆ.




