ಅಂಬೇಡ್ಕರ್ ಅವರು ʼಹಿಂದುವಾಗಿ ಹುಟ್ಟಿದ್ದೇನೆ; ಆದರೆ ಹಿಂದುವಾಗಿ ಸಾಯಲಾರೆʼ ಎಂದು ಹೇಳಿದ ಘೋಷಣೆಯನ್ನು ದಲಿತರು ಪುನರುಚ್ಛಾರ ಸಂಕಲ್ಪ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹಿರಿಯ ಹೋರಾಟಗಾರ ಎಂ.ಆರ್.ಭೇರಿ ಹರ್ಷ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ನಡೆಯುತ್ತಿರುವ ಏಮ್ಸ್ ಹೋರಾಟ ವೇದಿಕೆಯಲ್ಲಿ ಶುಕ್ರವಾರ ಯೇವೋಲಾ ಘೋಷಣಾ ಸಂಕಲ್ಪ ಸಮಿತಿ ವತಿಯು ʼದಲಿತರ ಯೇವೋಲಾ ಘೋಷಣಾ ಪುನರುಚ್ಛಾರ ಸಮಾವೇಶʼ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಹಿಂದು ಧರ್ಮದಲ್ಲಿನ ಜಾತಿಪದ್ಧತಿ, ಶೋಷಣೆ, ದೌರ್ಜನ್ಯ, ಮೌಢ್ಯ ಮತ್ತು ಅಸ್ಪೃಶ್ಯತೆ ಸೇರಿದಂತೆ ಹಿಂದು ಧರ್ಮದ ಸಂಕೋಲೆಯಿಂದ ಹೊರಬರಲು ಅಂಬೇಡ್ಕರ್ ಅವರು 1935ರ ಅ.13 ರಂದು ಯೋವೋಲಾದ ನಿಮ್ನ ವರ್ಗಗಳ ಸಮ್ಮೇಳನ ನಡೆಸಿದರು” ಎಂದು ಹೇಳಿದರು.
ಹಿರಿಯ ಹೋರಾಟಗಾರ ಜೆ.ಬಿ. ರಾಜು ಮಾತನಾಡಿ, “ಹಿಂದು ಎನ್ನುವುದು ಅಸಾಂವಿಧಾನಿಕ ಪದವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಧರ್ಮಾಧಾರಿತವಾಗಿ ಮೀಸಲಾತಿ ನೀಡುತ್ತಿದ್ದ ವೇಳೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ನಿಮ್ನ ವರ್ಗಗಳಿಗೆ ವಿದ್ಯೆ, ಉದ್ಯೋಗ ಹಾಗೂ ರಾಜಕೀಯ ಅಧಿಕಾರದಲ್ಲಿ ಮೀಸಲಾತಿ ಹಕ್ಕು ನೀಡಬೇಕೆಂದು ಬ್ರಿಟಿಷರಿಗೆ ಒತ್ತಾಯಿಸಿದರು” ಎಂದು ನುಡಿದರು.
“ದಲಿತರು ಹಿಂದುಗಳು ಹೌದೋ-ಅಲ್ಲವೋ ಎಂಬುದನ್ನು ಬ್ರಿಟಿಷರಿಗೆ ಸಾಬೀತು ಪಡಿಸಲು ಚೌಡರ್ ಕೆರೆ ನೀರು ಮುಟ್ಟುವ ಹೋರಾಟ ಮತ್ತು ಕಾಳರಾಂ ದೇವಸ್ಥಾನ ಪ್ರವೇಶ ಹಮ್ಮಿಕೊಂಡು ದಲಿತರು ಹಿಂದುಗಳಲ್ಲ ಎಂಬುದನ್ನು ಬ್ರಿಟಿಷರಿಗೆ ಬಾಬಾ ಸಾಹೇಬರು ಸಾಬೀತು ಪಡಿಸಿದ್ದರು” ಎಂದರು.
ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ʼಹಿಂದುವಾಗಿ ಹುಟ್ಟಿದ್ದೇನೆ-ಆದರೆ ಹಿಂದುವಾಗಿ ಸಾಯಲಾರೆʼ ಎಂದು ಸಾಮೂಹಿಕ ಪ್ರತಿಜ್ಞೆ ಬೋಧಿಸಿದರು.
ಹಿರಿಯ ಹೋರಾಟಗಾರ ಸಿ.ದಾನಪ್ಪ ನಿಲೋಗಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜೆ.ಶರಣಪ್ಪ ಬಲ್ಲಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ
ಕಾರ್ಯಕ್ರಮದಲ್ಲಿ ಹಿರಿಯ ಹೋರಾಟಗಾರರಾದ ಸಿ.ದಾನಪ್ಪ ನಿಲೋಗಲ್, ರವೀಂದ್ರ ನಾಥ ಪಟ್ಟಿ, ದೊಡ್ಡಪ್ಪ ಮುರಾರಿ, ಏಮ್ಸ್ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಬಸವರಾಜ ಕಳಸ, ಖಾಜಾ ಅಸ್ಲಂ, ಶರಣಪ್ಪ ದಿನ್ನಿ, ಹೇಮರಾಜ್ ಅಸ್ಕಿಹಾಳ, ಆರ್.ತಿಮ್ಮಾರೆಡ್ಡಿ, ಎಂ.ಈರಣ್ಣ, ಭಾರತೀಯ ಬೌದ್ಧ ಮಹಾಸಭಾದ ಜಿಲ್ಲಾಧ್ಯಕ್ಷ ನರಸಿಂಹಲು, ಲಕ್ಷ್ಮಣ ಜಾನೇಕಲ್, ಕೆ.ಇ.ಕುಮಾರ್, ಶಿವರಾಯ ಅಕ್ಕರಕಿ, ಸಿ.ಕೆ.ಆಶೋಕ್ ಕುಮಾರ್ ಜೈನ್, ಭೀಮಣ್ಣ ಮಂಚಾಲೆ, ವಿಶ್ವನಾಥ ಪಟ್ಟಿ, ಶೇಖರ್ ರಾಂಪೂರಿ, ರವಿದಾದಸ್, ಯಮುನಪ್ಪ ಜಾಗೀರ ಪನ್ನೂರು, ತಮ್ಮಣ್ಣ ವಕೀಲರು, ವರಲಕ್ಷ್ಮೀ, ಶಾಂತಾದೇವಿ, ಪ್ರಭು ಯಮನಾಳ, ಕ ಶಾಂತಪ್ಪ ಪಿತಗಲ್ ಸೇರಿದಂತೆ ದಲಿತ ಸಂಘಟನೆ ಮುಖಂಡರು, ಪ್ರಗತಿಪರ ಚಿಂತಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.