ನಡುರಾತ್ರಿಯಲ್ಲಿ ರಸ್ತೆ ಬದಿ ನಿಂತಿದ್ದ ಯುವಕರನ್ನು ಮನೆಗೆ ಹೋಗಿ ಎಂದಿದ್ದಕ್ಕೆ ಯುವಕರು ಪೊಲೀಸರು ಜೊತೆ ವಾಗ್ವಾದಕ್ಕಿದ್ದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಘಟನೆ ಸಂಬಂಧ ಕಾಂಗ್ರೆಸ್ ಮುಖಂಡ ಸೇರಿ ನಾಲ್ವರ ವಿರುದ್ಧ ನಗರದ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರನ್ನು ನಿಂದಿಸಿ, ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಡಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ.16ರ ರಾತ್ರಿ ಸುಮಾರು 11.45ರ ವೇಳೆಗೆ ಆಜಾದ್ ನಗರ ಠಾಣೆಯ ಪೊಲೀಸರು ಗಸ್ತು ನಡೆಸುತ್ತಿದ್ದರು. ಈ ವೇಳೆ ಮಾಗನಹಳ್ಳಿ ರಸ್ತೆಯಲ್ಲಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಪುತ್ರ ಹಸನ್ ಮತ್ತು ನಾಲ್ವೈದು ಯುವಕರು ನಿಂತಿದ್ದರು. ಅವರನ್ನು ಮನೆಗೆ ಹೋಗಿ ಎಂದಿದ್ದಕ್ಕೆ, ಯುವಕರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಯುವಕರ ಫೋಟೋ ತೆಗೆಯಲು ಮುಂದಾದಗ ಗಲಾಟೆ ನಡೆದಿದೆ. ಸ್ಥಳಕ್ಕೆ ಇಮ್ರಾನ್ ಪಾಷಾ ತೆರಳುವಷ್ಟರಲ್ಲಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಹಾಗೂ ಸಹೋದರ ಸಾಕ್ ಪೈಲ್ವಾನ್ ಕೂಡ ಸ್ಥಳಕ್ಕೆ ಬಂದಿದ್ದರು. 11 ಗಂಟೆ ಬಳಿಕ ಯಾರೂ ಓಡಾಡಬಾರದೆಂದು ಯಾವ ಕಾನೂನಿನಲ್ಲಿದೆ ಎಂದು ಆಯೂಬ್ ಪೈಲ್ವಾನ್ ಪೊಲೀಸರನ್ನು ಏಕವಚನದಲ್ಲಿ ನಿಂದಿಸಿದ್ದಾರೆ.
ಘಟನೆ ಸಂಬಂಧ ಅಯೂಬ್ ಪೈಲ್ವಾನ್, ಸಾಕ್ ಪೈಲ್ವಾನ್, ಅಯೂಬ್ ಪೈಲ್ವಾನ್ ಪುತ್ರ ಹಸನ್ ಹಾಗೂ ಹುಸೇನ್ ವಿರುದ್ಧ ಪ್ರಕರಣ ದಾಖಲಾಗಿದೆ.