ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣದಲ್ಲಿ ಭಾನುವಾರ ವೇಣಗೋಪಾಲ ನಾಯಕನನ್ನು ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯ ಲಕ್ಷ್ಮಿ ಕಿರಣ್ ಸಹೋದರ ಶಂಕರ್‌ನನ್ನು ಬಂಧಿಸಿದ್ದಾರೆ.
ಈ ಹಿಂದೆ ನಡೆದಿದ್ದ ಹನುಮಜಯಂತಿ ಆಚರಣೆ ಸಮಯದಲ್ಲಿ ನಟ ದಿ. ಪುನೀತ್ ರಾಜ್‌ಕುಮಾರ್ ಭಾವಚಿತ್ರ ಹಾಕುವ ವಿಚಾರದಲ್ಲಿ ಗಲಾಟೆ ನಡೆದಿತ್ತು. ಗಲಾಟೆ ಸಂಬಂಧ ರಾಜಿ-ಸಂದಾನ ಮಾಡಿಕೊಳ್ಳಲು ವೇಣುಗೋಪಾಲ್‌ನನ್ನು ಭಾನುವಾರ ಕರೆಸಿಕೊಂಡಿದ್ದ ತಂಡವೊಂದು ಆತನನ್ನು ಕೊಲೆ ಮಾಡಿತ್ತು.
ಪ್ರಕರಣ ಸಂಬಂಧ ಆರು ಮಂದಿ ವಿರುದ್ಧ ದಾರು ದಾಖಲಾಗಿತ್ತು. ಸೋಮವಾರ ಆರೋಪಿಗಳಾದ ಸಂದೇಶ್ ಮತ್ತು ಮಣಿಕಂಠ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಇದೀಗ, ಉಳಿದ ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಂಕರ ಅಲಿಯಾಸ್ ತುಪ್ಪ, ಅನಿಲ್, ಹ್ಯಾರಿಸ್ ಮತ್ತು ಮಂಜ ಎಂದು ಗುರುತಿಸಲಾಗಿದೆ.