ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಹುಮನಾಬಾದ್ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಕಲಬುರಗಿ ನಗರದ ಬಸವನಗರ ನಿವಾಸಿ ವಿಜಯಾನಂದ ರವಿಕುಮಾರ್ ಅಂಬುಲಗೆ (28) ಮೃತರು.
ಕಲಬುರಗಿ-ಬೀದರ್ ಡೆಮೊ ರೈಲಿನಲ್ಲಿ ಭಾಲ್ಕಿ ತಾಲ್ಲೂಕಿನ ಮೈಲಾರ ಮಲ್ಲಣ್ಣಾ ದೇವಸ್ಥಾನಕ್ಕೆ ಬರುವ ವೇಳೆ ಈ ದುರ್ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರು ʼಈದಿನʼಕ್ಕೆ ತಿಳಿಸಿದ್ದಾರೆ.
ರೈಲು ಹುಮನಾಬಾದ್ ನಿಲ್ದಾಣದಲ್ಲಿ ನಿಲುಗಡೆಯಾಗಿತ್ತು. ಈ ವೇಳೆ ವಿಜಯಾನಂದ ಕುಡಿಯಲು ನೀರು ತರಲು ರೈಲಿನಿಂದ ಕೆಳಗಿಳಿದಿದ್ದರು. ರೈಲು ಚಲಿಸುತ್ತಿರುವುದನ್ನು ಕಂಡ ವಿಜಯಾನಂದ ಅವಸರದಲ್ಲಿ ರೈಲು ಹತ್ತುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ರೈಲು ಹಳಿ ಮೇಲೆ ಬಿದ್ದರು. ಈ ವೇಳೆ ರೈಲು ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಮನಾಬಾದ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು.
ಈ ಸಂಬಂಧ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಶನಿವಾರದ ಶಾಲಾ ಸಮಯ ಬದಲಾವಣೆಗೆ ಪ್ರೌಢ ಶಾಲಾ ಶಿಕ್ಷಕರ ಸಂಘ ಮನವಿ