ಯುವಜನತೆ ಸಮಾಜಬಾಹಿರ, ಕಾನೂನು ಬಾಹಿರ ಕೃತ್ಯಗಳಿಂದ ದೂರವಿರಬೇಕು. ಈ ಮೂಲಕ ಭವ್ಯಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ ಕರೆ ನೀಡಿದರು.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ಹಳ್ಳಿ ಮಕ್ಕಳ ಸಂಘ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಅಪರಾಧ ತಡೆ ಮತ್ತು ಜನಜಾಗೃತಿ ಅಭಿಯಾನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಭಾರತೀಯರ ಧರ್ಮ ಗ್ರಂಥವಾದ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಅವಕಾಶಗಳನ್ನು ನೀಡಿದೆ. ಸಂವಿಧಾನಾತ್ಮಕ ಸವಲತ್ತು ಪಡೆಯುವ ಪ್ರತಿಯೊಬ್ಬರು ಈ ನೆಲದ ಕಾನೂನಿಗೆ ಬದ್ಧರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದಾಗ ಮಾತ್ರವೇ ಸಂವಿಧಾನದ ಆಶಯಗಳು ಈಡೇರುತ್ತವೆ. ಪ್ರಜಾಪ್ರಭುತ್ವದ ಬೇರುಗಳು ಗಟ್ಟಿಯಾಗಿ ಆರೋಗ್ಯವಂತ ಸಮಾಜ ನಿರ್ಮಾಣವಾಗಲಿದೆ. ಈ ದಿಸೆಯಲ್ಲಿ ಹಳ್ಳಿ ಮಕ್ಕಳ ಸಂಘ ಯುವಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅಪರಾಧ ತಡೆ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.

ವೃತ್ತ ನಿರೀಕ್ಷಕ ಮಂಜುನಾಥ್ ಮಾತನಾಡಿ, 18 ವರ್ಷ ಪೂರೈಸದ ಹದಿಹರೆಯದ ಮಕ್ಕಳು ವಾಹನ ಪರವಾನಗಿಯಿಲ್ಲದೆ ವಾಹನ ಚಾಲನೆ ಮಾಡಬಾರದು. ಚಾಲನಾ ಪರವಾನಗಿ ಪಡೆದೇ ದ್ವಿಚಕ್ರ, ತ್ರಿಚಕ್ರ, ಕಾರು ಇತ್ಯಾದಿ ವಾಹನ ಚಾಲನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ವಾಹನ ಚಾಲನೆಯಲ್ಲಿದ್ದಾಗ ಮೊಬೈಲ್ ಬಳಸಬಾರದು. ದ್ವಿಚಕ್ರ ವಾಹನದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಕಾರಾದರೆ ಸೀಟ್ ಬೆಲ್ಟ್ ಧರಿಸಬೇಕು. ಮಧ್ಯಪಾನ ಮಾಡಿ ವಾಹನ ಚಲಾಯಿಸಲೇಬಾರದು ಎಂದು ಸಲಹೆ ನೀಡಿದರು.
ಪೋಷಕರು ಅಪ್ರಾಪ್ತರಿಗೆ ವಾಹನ ನೀಡಿ ಕಾನೂನು ಉಲ್ಲಂಘಿಸಬಾರದು. ಶಾಲಾ ವಿದ್ಯಾರ್ಥಿಗಳು ರಸ್ತೆ ದಾಟುವಾಗ ಎಚ್ಚರವಹಿಸಬೇಕು. ಬೈಕ್ ಸವಾರ ಮತ್ತು ಹಿಂಬದಿ ಕುಳಿತವರು ಇಬ್ಬರೂ ಕೂಡ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ‘ರೋಹಿತ್ ಕಾಯ್ದೆ’ ಜಾರಿಗಾಗಿ ಆಗಬೇಕಿದೆ ‘ಜನಾಂದೋಲನ’
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಸುರಕ್ಷತೆ ಕುರಿತು ಜಾಗೃತಿ ಜಾಥಾ ನಡೆಸಲಾಯಿತು. ವಾಪಸಂದ್ರ ಸರಕಾರಿ ಶಾಲೆಯ 250 ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಸಿಹಿ ವಿತರಿಸಿದರು.
ವೇದಿಕೆಯಲ್ಲಿ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ಅಮರ್ ಮೋಗ್ಲಿ, ಸಂಚಾರಿ ಠಾಣೆ ಸಬ್ ಇನ್ಸ್ಪೆಕ್ಟರ್ ಮಂಜುಳ, ತಿಪ್ಪೇನಹಳ್ಳಿ ನಾರಾಯಣ್, ಹಳ್ಳಿಮಕ್ಕಳ ಸಂಘದ ವೀರಸಂಗಯ್ಯ ಇದ್ದರು.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.