ಇಂದಿನ ಯುವ ಪೀಳಿಗೆ ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗದೆ ಕ್ರೀಡಾ ಚಟುವಟಿಕೆಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಾನಸಿಕ ಒತ್ತಡದಿಂದ ಹೊರ ಬರಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುಟ್ಟಿ ಎಂದು ಸಮಾಜ ಸೇವಕ ಆನಂದರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಗೇಪಲ್ಲಿ ತಾಲೂಕಿನ ಪೆನಮಲೆ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತ ಪೆನಮಲೆ ಭಜರಂಗಿ ಸೇವಾ ಟ್ರಸ್ಟ್ ವತಿಯಿಂದ ಅಯೋಜಿಸಿದ್ದ ಎರಡು ದಿನಗಳ ದಸರಾ ಗ್ರಾಮೀಣ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಹಲವು ದಶಕಗಳ ಹಿಂದೆ ನಗರ ಮತ್ತು ಪಟ್ಟಣ ಪ್ರದೇಶದ ನಾಗರೀಕರಿಗೆ ಮಾತ್ರ ಸೀಮಿತವಾಗಿದ್ದ ಮೊಬೈಲ್ ಬಳಕೆ ಹಾಗೂ ಇಂಟರ್‌ನೆಟ್ ಗೇಮ್‌ಗಳು, ಇತ್ತಿಚೀನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿವೆ. ಮೊಬೈಲ್ ಇಂಟರ್‌ನೆಟ್ ಬಳಕೆಯನ್ನು ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು ಬಳಕೆ ಮಾಡಿಕೊಳ್ಳುವ ವಾತವರಣ ಇಂದಿನ ಸಮಾಜದಲ್ಲಿ ನಿರ್ಮಾಣವಾಗಿದ್ದು ಯುವ ಪೀಳಿಗೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ದಿನಚರಿ ಹವ್ಯಾಸಗಳನ್ನು ಬದಲಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಮನುಷ್ಯ ದೇಹಕ್ಕೆ ಆರೋಗ್ಯ ನೀಡುವ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಖೋ ಖೋ ಮುಂತಾದ ಕ್ರೀಡೆಗಳನ್ನು ಮೂಲೆ ಗುಂಪು ಮಾಡುವ ಮಟ್ಟಕ್ಕೆ ಇಂಟರ್ ನೆಟ್ ಗೇಮ್‌ಗಳು ಬೆಳೆದು ನಿಂತಿವೆ. ಇದರಿಂದ ಮನುಷ್ಯನ ದೇಹಕ್ಕೆ ವ್ಯಾಯಾಮ ಇಲ್ಲದಂತಾಗಿ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಉತ್ತಮ ಆರೋಗ್ಯಕ್ಕಾಗಿ ಗ್ರಾಮೀಣ ಕ್ರೀಡೆ ಮತ್ತು ಕಲೆಗೆ ಮಹತ್ವ ಕೊಟ್ಟು ಪ್ರತಿಯೊಬ್ಬರು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯದ ಜೊತೆಗೆ ದೇಹವೂ ಬಲಿಷ್ಠಗೊಳ್ಳುತ್ತದೆ ಎಂದರು.
ಬಾಗೇಪಲ್ಲಿ ತಾಲೂಕಿನ ಪೆನಮಲೆ ಗ್ರಾಮದಲ್ಲಿ ನಡೆದ ದಸರಾ ಗ್ರಾಮೀಣ ಕ್ರೀಡಾ ಕೂಟದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ 15 ತಂಡಗಳು ಭಗವಹಿಸಿದ್ದು, ಪೆನಮಲೆ ಲೆಜೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ಪಂದ್ಯಾವಳಿಯಲ್ಲಿ ಜಯಭೇರಿ ಸಾಧಿಸಿದರೆ, ಬಾಲರೆಡ್ಡಿಪಲ್ಲಿ ಗ್ರಾಮದ ಚೌಡೇಶ್ವರಿ ಯುವಕರ ಬಳಗ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೊಲೀಸರಿಗೆ-ಸರ್ಕಾರಕ್ಕೆ ಸವಾಲಾಗಿರುವ ಸೈಬರ್ ಕ್ರೈಮ್
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸತ್ಯನಾರಾಯಣರೆಡ್ಡಿ, ಮುಖಂಡರಾದ ರಾಜೇಂದ್ರ, ನವೀನ್, ಹರೀಶ್, ರಾಜಾರೆಡ್ಡಿ, ಮಹೇಂಧ್ರ, ಶ್ರೀನಿವಾಸ್, ಶ್ರೀಧರ ಮತ್ತಿತರರು ಇದ್ದರು.