ಧರ್ಮಸ್ಥಳ ಸುತ್ತಮುತ್ತ ನಡೆದಿದೆ ಎನ್ನಲಾದ ಅತ್ಯಾಚಾರ, ಅಸಹಜ ಸಾವಿನ ಕುರಿತು ಕಳೆದ ಹಲವು ವರುಷಗಳಿಂದ ವಸ್ತುನಿಷ್ಠ ವರದಿ ಮಾಡುತ್ತಾ ಬಂದಿರುವ ಕುಡ್ಲ ರಾಂಪೇಜ್ ಯೂಟ್ಯೂಬ್ ಚಾನಲ್ ನ ವರದಿಗಾರ, ಪತ್ರಕರ್ತ ಅಜಯ್ ಅಂಚನ್ ಮೇಲೆ ಆ ಭಾಗದ ಗೂಂಡಾ ಗುಂಪೊದು ಧರ್ಮಸ್ಥಳದ ಹೆಸರು ಕೆಡಿಸುತ್ತೀರಿ ಎಂಬ ನೆಪ ಮುಂದಿಟ್ಟುಕೊಂಡು ಅಜಯ್ ಅಂಚನ್, ಸಂತೋಷ್ ಸಹಿತ ಇತರ ಮಾಧ್ಯಮ ವರದಿಗಾರರ ಮೇಲೆ ದಾಳಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಯನ್ನು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಖಂಡಿಸುತ್ತದೆ ಹಾಗೂ ಹಲ್ಲೆ ನಡೆಸಿದ ಗೂಂಡಾಗಳನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಸಹಿತ, ಪದ್ಮಲತಾ, ವೇದವಲ್ಲಿ, ಆನೆ ಮಾವುತ ಹೀಗೆ ಧರ್ಮಸ್ಥಳದ ಸುತ್ತಮುತ್ತಲು ನಡೆದಿವೆ ಎನ್ನಲಾದ ಹಲವು ಅತ್ಯಾಚಾರ, ಕೊಲೆ, ಅಸಹಜ ಸಾವಿನ ಕುರಿತು ತನಿಖೆಗೆ ಆಗ್ರಹಿಸಿ ನಡೆಯುತ್ತಿದ್ದಂತಹ ಹೋರಾಟಗಳನ್ನು ವಸ್ತುನಿಷ್ಠವಾಗಿ ವರದಿ ಮಾಡುತ್ತಾ ಬಂದಿದ್ದ ಪತ್ರಕರ್ತ ಅಜಯ್ ಅಂಚನ್ ಈ ನಾಡಿನ ಜನರ ಗಮನ ಸೆಳೆದಿದ್ದರು. ಅಲ್ಲದೆ ಈ ಎಲ್ಲಾ ಪ್ರಕರಣವನ್ನು ಪ್ರತಿಯೊಂದು ಆಯಾಮಗಳಲ್ಲೂ ಅವಲೋಕಿಸಿ ತನಿಖಾ ವರದಿ ರೀತಿಯಲ್ಲಿ ಸುದ್ಧಿ ಬಿತ್ತರಿಸುವ ಪ್ರಯತ್ನವನ್ನು ನಡೆಸುತ್ತಾ ಬಂದಿರುತ್ತಾರೆ. ಎಷ್ಟೇ ಒತ್ತಡ, ಬೆದರಿಕೆಗಳಿದ್ದರೂ ಆತ ವರದಿ ಮಾಡದಂತೆ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: BREAKING NEWS | ಧರ್ಮಸ್ಥಳದಲ್ಲಿ ಗೂಂಡಾಗಿರಿ: ನಾಲ್ವರು ಯೂಟ್ಯೂಬರ್‌ಗಳ ಮೇಲೆ ಮಾರಣಾಂತಿಕ ಹಲ್ಲೆ
“ಇದ್ಯಾವುದನ್ನು ಲೆಕ್ಕಿಸದೆ ಅನ್ಯಾಯಕ್ಕೊಳಗಾದವರ ಪರವಾಗಿ ನಿಂತು ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಕರಣಗಳ ಕುರಿತು ವಸ್ತುನಿಷ್ಠವಾಗಿ ವರದಿ ಮಾಡುತ್ತಾ ಬಂದಿರುವ ಅಜಯ್ ಅಂಚನ್ ಎದೆಗಾರಿಕೆಯನ್ನು ನಾಗರೀಕ ಸಮಾಜ ಮೆಚ್ಚಬೇಕಾಗಿದೆ. ಇತ್ತೀಚೆಗೆ ಅನಾಮಿಕನೊಬ್ಬ ಧರ್ಮಸ್ಥಳದ ಸುತ್ತಮುತ್ತಲ ಕಾಡಿನಲ್ಲಿ ಹೂತುಹಾಕಿರುವ ಶವಗಳ ತೋರಿಸಿ ಕೊಡಲು ಮುಂದಾಗುವ ಕುರಿತು ದೂರು ನೀಡಿದ ಹಿನ್ನಲೆಯಲ್ಲಿ ಆ ನಂತರ ನಡೆದ ಎಲ್ಲಾ ಬೆಳವಣೆಗೆಗಳು ಹಾಗೂ ಎಸ್.ಐ.ಟಿ ಈ ಕುರಿತು ತನಿಖೆ ಪ್ರಾರಂಭಿಸಲು ಮುಂದಾದ ದಿನದಿಂದಲೂ ಅಜಯ್ ಅಂಚನ್ ಧರ್ಮಸ್ಥಳದಲ್ಲಿ ನಡೆಯುತ್ತಿರುವ ದಿನನಿತ್ಯ ಬೆಳವಣೆಗೆಯನ್ನು ವರದಿ ಮಾಡುತ್ತಲೇ ಬಂದಿದ್ದಾರೆ. ಈ ರೀತಿ ವರದಿ ಮಾಡುವುದನ್ನು ಸಹಿಸದ ಕೆಲವೊಂದು ಶಕ್ತಿಗಳು ಅಜಯ್ ಅಂಚನ್ ಮೇಲೆ ಮುಗಿಬಿದ್ದು ಮಾರಣಾಂತಿಕ ಹಲ್ಲೆ ನಡೆಸಿ ಗೂಂಡಾಗಿರಿ ಮೆರೆದಿದ್ದಾರೆ. ಆ ಮೂಲಕ ಪತ್ರಿಕಾ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧಮನಿಸಲು ಹೊರಟಿದ್ದಾರೆ. ದೈಹಿಕ ದಾಳಿಗಳನ್ನು ನಡೆಸುವ ಮೂಲಕ ಬೆದರಿಸಲು, ಬಾಯಿಮುಚ್ಚಿಸಲು ಪ್ರಯತ್ನಿಸಿದ್ದಾರೆ. ಈ ಪ್ರಕರಣವನ್ನು ಸರಕಾರ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು, ಗೂಂಡಾಗಿರಿ ಮೆರೆದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣಕ್ರಮಕ್ಕೆ ಒಳಪಡಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ | ಜಿಪಿಆರ್ ಸಲಕರಣೆಗಳ ಅಭಾವ? ವಕೀಲರ ಕಳವಳ