ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ರಾಜ್ಯ ಸರ್ಕಾರ 2024ರ ಜನವರಿಯಲ್ಲಿ ʼಯುವನಿಧಿʼ ಯೋಜನೆಗೆ ಚಾಲನೆ ನೀಡಿದೆ. ಜನವರಿ-ಜುಲೈ ತಿಂಗಳವರೆಗೆ ಜಿಲ್ಲೆಯಿಂದ ಒಟ್ಟು 7,266 ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದಾರೆ. ಸರಿಯಾದ ದಾಖಲೆ ಒದಗಿಸಿರುವ 2,743 ನಿರುದ್ಯೋಗಿಗಳು ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ರಾಜ್ಯ ಸರ್ಕಾರದ ‘ಐದನೇ ಗ್ಯಾರಂಟಿ’ ಯುವನಿಧಿ ಫಲಾನುಭವಿಯಾಗಲು ಪ್ರತಿ ತಿಂಗಳು ʼನಿರುದ್ಯೋಗಿʼ ಎಂಬ ಸ್ವಯಂ ಘೋಷಣಾ ಪತ್ರ ನೀಡಲು ಪದವೀಧರರು ಹಿಂದೇಟು ಹಾಕುತ್ತಿರುವ ಪರಿಣಾಮ ಯೋಜನೆಗೆ ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಒಟ್ಟು ನೋಂದಣಿಯಾಗಿರುವ ನಿರುದ್ಯೋಗಿಗಳಲ್ಲಿ ಭತ್ಯೆ ಪಡೆಯುತ್ತಿರುವವರ ಸಂಖ್ಯೆ ಶೇ.50ರಷ್ಟು ಮೀರಿಲ್ಲ ಎಂಬುದು ಗಮನಾರ್ಹ ವಿಷಯ.
ಪದವೀಧರರಿಗೆ ಪ್ರತಿ ತಿಂಗಳು ₹3,000 ಹಾಗೂ ಡಿಪ್ಲೊಮಾ ಉತ್ತೀರ್ಣರಾದವರಿಗೆ ₹1,500 ನಿರುದ್ಯೋಗಿ ಭತ್ಯೆಯನ್ನು ರಾಜ್ಯ ಸರ್ಕಾರ ಜನವರಿ ತಿಂಗಳಿಂದ ನೀಡುತ್ತಿದೆ. ಪದವೀಧರರಿಗಿಂತ ಡಿಪ್ಲೊಮಾ ಪೂರೈಸಿದವರಲ್ಲಿ ಭತ್ಯೆ ಪಡೆಯಲು ನಿರಾಸಕ್ತಿ ಇರುವುದು ಕಂಡು ಬಂದಿದೆ. ಬೀದರ್ ಜಿಲ್ಲೆಯಲ್ಲಿ ಸಹ ನಿರುದ್ಯೋಗಿ ಭತ್ಯೆ ಪಡೆದ ಡಿಪ್ಲೊಮಾ ಫಲಾನುಭವಿಗಳ ಸಂಖ್ಯೆ ಕೇವಲ 42 ಮಾತ್ರ.
ಯುವನಿಧಿ ಯೋಜನೆಯು 2022-23ರಲ್ಲಿ ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದವರು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಪರೀಕ್ಷಾ ಫಲಿತಾಂಶ ಹೊರಬಿದ್ದ ಆರು ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಈ ನಿರುದ್ಯೋಗ ಭತ್ಯೆ ಎರಡು ವರ್ಷಗಳ ಅವಧಿಗೆ ಮಾತ್ರ ದೊರೆಯಲಿದೆ.

ಈ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ 7 ತಿಂಗಳಲ್ಲಿ ಒಟ್ಟು 7,266 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅದರಲ್ಲಿ ಪುರುಷ (3,482) ಹಾಗೂ ಮಹಿಳಾ (3,784) ನಿರುದ್ಯೋಗಿಗಳು ನೋಂದಣಿ ಮಾಡಿದ್ದಾರೆ. ಪ್ರತಿ ತಿಂಗಳ 25ನೇ ತಾರೀಖಿನ ಒಳಗೆ ಆನ್‌ಲೈನ್ ಮೂಲಕ ಸಲ್ಲಿಸಬೇಕು. ಈ ಸ್ವಯಂ ಘೋಷಣಾ ಪತ್ರ ಒದಗಿಸದಿದ್ದರೆ ಫಲಾನುಭವಿಗೆ ಆ ತಿಂಗಳ ನಿರುದ್ಯೋಗ ಭತ್ಯೆ ದೊರೆಯುವುದಿಲ್ಲ. ಪ್ರತಿ ತಿಂಗಳು ʼನಿರುದ್ಯೋಗಿʼ ಎಂಬುದಾಗಿ ಘೋಷಣೆ ಮಾಡಿಕೊಳ್ಳಲು ಪದವೀಧರರು ಹಿಂದೇಟು ಹಾಕುತ್ತಿರುವುದರಿಂದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಭತ್ಯೆ ಬರುತ್ತಿಲ್ಲ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿಗಳು ಹೇಳುತ್ತಾರೆ.
7 ತಿಂಗಳಲ್ಲಿ 3.33 ಕೋಟಿ ʼಯುವನಿಧಿʼ ಭತ್ಯೆ ಪಾವತಿ:
ಯುವನಿಧಿ ಯೋಜನೆ ಜಾರಿಯಾದ 2024ರ ಜನವರಿ-ಜುಲೈ ತಿಂಗಳವರೆಗೆ ಜಿಲ್ಲೆಯ ಒಟ್ಟು 2743 ಫಲಾನುಭವಿಗಳ ಖಾತೆಗೆ ಒಟ್ಟು 3.33 ಕೋಟಿ ರೂ. ನಿರುದ್ಯೋಗಿ ಭತ್ಯೆ ಪಾವತಿಸಲಾಗಿದೆ. ಇದರಲ್ಲಿ 2,701 ಪದವಿ ಹಾಗೂ 42 ಡಿಪ್ಲೊಮಾ ನಿರುದ್ಯೋಗಿ ಯುವಕ-ಯುವತಿಯರು ಡಿಬಿಟಿ ಮೂಲಕ ಯುವನಿಧಿ ಯೋಜನೆಯ ಭತ್ಯೆ ಪಡೆದಿದ್ದಾರೆ. ಒಟ್ಟು ಫಲಾನುಭವಿಗಳಲ್ಲಿ ಯುವಕರು (1,398), ಯುವತಿಯರು (1,183) ಲಾಭ ಪಡೆದ ನಿರುದ್ಯೋಗಿಗಳಾಗಿದ್ದಾರೆ ಎಂದು ಇಲಾಖೆಯ ಮಾಹಿತಿ ಹೇಳುತ್ತಿದೆ.
ಯೋಜನೆ ಜಾರಿಯಾದ ಮೊದಲ ತಿಂಗಳು ಜನವರಿಯಲ್ಲಿ ಒಟ್ಟು 41.82 ಲಕ್ಷ ರೂ. ಹಣ ಜಿಲ್ಲೆಯ ಯುವನಿಧಿ ಫಲಾನುಭವಿಗಳಿಗೆ ಹಣ ಪಾವತಿಯಾಗಿದೆ. ಇನ್ನು ಫೆಬ್ರವರಿ (48.33), ಮಾರ್ಚ್ (23.13), ಎಪ್ರೀಲ್ (10.65), ಮೇ (63.09), ಜೂನ್ 64.33) ಹಾಗೂ ಜುಲೈ (81.66) ತಿಂಗಳು ಸೇರಿ ಏಳು ತಿಂಗಳಲ್ಲಿ ಒಟ್ಟು 3.33 ಕೋಟಿ ರೂ. ವೆಚ್ಚ ಮಾಡಲಾಗಿದೆ. ಮೊದಲ ಎರಡು ತಿಂಗಳು ಉತ್ತಮ ಸ್ಪಂದನೆ ದೊರೆತಿದೆ, ಆದರೆ, ಮಾರ್ಚ್-ಎಪ್ರೀಲ್ ಎರಡು ತಿಂಗಳು ಇಳಿಮುಖವಾಗಿದೆ. ಸ್ವಯಂ ಘೋಷಣಾ ಪತ್ರ ಸಲ್ಲಿಸಿದ ಹಿನ್ನಲೆ ಕಳೆದ ಜುಲೈ ತಿಂಗಳಲ್ಲಿ ಅತೀ ಹೆಚ್ಚು ಫಲಾನುಭವಿಗಳು ಯುವನಿಧಿ ಲಾಭ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂಬುದು ಅಧಿಕಾರಿಗಳ ಅಭಿಮತ.
ತಾಲೂಕುವಾರು ನೋಂದಣಿಯಾದ ಫಲಾನುಭವಿಗಳ ಸಂಖ್ಯೆ:
ಬೀದರ್ ಜಿಲ್ಲೆಯಲ್ಲಿ ಒಟ್ಟು 129 ಪದವಿ ಹಾಗೂ 9 ಡಿಪ್ಲೊಮಾ ಕಾಲೇಜುಗಳಿವೆ. ಅದರಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ 12,870 ಹಾಗೂ 270 ಡಿಪ್ಲೊಮಾ ವಿದ್ಯಾರ್ಥಿಗಳು ಯೋಜನೆಗೆ ಅರ್ಹರಾಗಿದ್ದಾರೆ. ಒಟ್ಟು 8 ತಾಲೂಕಿನಲ್ಲಿ 7,266 ಫಲಾನುಭವಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಔರಾದ್ (680), ಬಸವಕಲ್ಯಾಣ (1,379), ಭಾಲ್ಕಿ (1,198), ಬೀದರ್ (2,113), ಚಿಟಗುಪ್ಪ (539), ಹುಮನಾಬಾದ್ (1,106), ಹುಲಸೂರ (89) ಹಾಗೂ ಕಮಲನಗರ (182) ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 4 ಅರ್ಜಿಗಳು ತಿರಸ್ಕೃತವಾಗಿವೆ. ಬೀದರ್ ಹಾಗೂ ಬಸವಕಲ್ಯಾಣ ತಾಲೂಕಿನ ಅಭ್ಯರ್ಥಿಗಳು ಹೆಚ್ಚು ನೋಂದಣಿ ಮಾಡಿಸಿಕೊಂಡಿದ್ದರೆ, ಕಮಲನಗರ ಮತ್ತು ಹುಲಸೂರ ತಾಲೂಕುಗಳಲ್ಲಿ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ ತೀರಾ ಕಡಿಮೆಯಾಗಿದೆ.
ಜಾತಿವಾರು ʼಯುವನಿಧಿʼ ಫಲಾನುಭವಿಗಳ ಸಂಖ್ಯೆ :
ಯುವನಿಧಿ ಯೋಜನೆ ಲಾಭ ಪಡೆಯಲು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ (1,745), ಪರಿಶಿಷ್ಟ ಪಂಗಡ (1,202), ಒಬಿಸಿ (3,429) ಹಾಗೂ ಸಾಮನ್ಯ (890) ಸೇರಿ ಒಟ್ಟು 7,266 ಅಭ್ಯರ್ಥಿಗಳು ನೋಂದಣಿ ಮಾಡಿದ್ದಾರೆ. ಅದರಲ್ಲಿ ಪದವಿ (156) ಹಾಗೂ ಡಿಪ್ಲೊಮಾ (7,110) ಅಭ್ಯರ್ಥಿಗಳಾಗಿದ್ದಾರೆ.
ʼರಾಜ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ʼಯುವನಿಧಿʼ ಯೋಜನೆ ಪಡೆಯಲು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಸಬೇಕು. ಆದರೆ, ವಿದ್ಯಾರ್ಥಿಗಳಿಗೆ ಪದೇ ಪದೇ ಸರ್ವರ್ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಸರ್ಕಾರ ಯೋಜನೆ ಘೋಷಿಸಿ ಸುಮ್ಮನಾದರೆ ಸಾಲದು, ಅದನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಆಯೋಜಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕುʼ ಎಂದು ಸಾಮಾಜಿಕ ಕಾರ್ಯಕರ್ತ ಜಗದೀಶ್ವರ ಬಿರಾದರ್ ಆಗ್ರಹಿಸುತ್ತಾರೆ.
ʼಬೀದರ್ ಜಿಲ್ಲೆಯಲ್ಲಿ ಒಟ್ಟು 7 ಸಾವಿರಕ್ಕೂ ಅಧಿಕ ನಿರುದ್ಯೋಗಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 2,701 ಪದವಿಧರ ಹಾಗೂ 42 ಡಿಪ್ಲೊಮಾ ಪೂರ್ಣಗೊಳಿಸಿದವರು ನಿರುದ್ಯೋಗ ಭತ್ಯೆ ಪಡೆಯಲಾರಂಭಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮಾಡಿ ಅರ್ಜಿ ಸಲ್ಲಿಸಿದ ಅರ್ಧದಷ್ಟು ಯುವ ನಿರುದ್ಯೋಗಿಗಳಿಗೆ ಡಿಬಿಟಿ ಮುಖಾಂತರ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದ್ದಾರೆʼ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಬಸವರಾಜ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಗ್ ಬ್ರೇಕಿಂಗ್ ನ್ಯೂಸ್ | ಅಕ್ರಮ ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾದ ಎಚ್‌ಡಿಕೆ
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುವವರ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸ್ವಯಂ ಘೋಷಣಾ ಪತ್ರ ನೀಡಲು ಅಭ್ಯರ್ಥಿಗಳಿಗೆ ಅರಿವು ಮೂಡಿಸಲಾಗುವುದು. ಉನ್ನತ ಶಿಕ್ಷಣ ಹಾಗೂ ಉದ್ಯೋಗ ದೊರೆತ ಹಿನ್ನಲೆ ಕೆಲ ಅಭ್ಯರ್ಥಿಗಳು ಯೋಜನೆಯಿಂದ ಹೊರಗುಳಿದಿದ್ದಾರೆ ಎಂದು ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
Hello sir I want to do this job
Hello sir