ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಮೈಸೂರು ಜಿಲ್ಲೆಯನ್ನು ಕ್ಷಯರೋಗ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಕೆ ಎಂ ಗಾಯತ್ರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕ್ಷಯಮುಕ್ತ ಗ್ರಾಮ ಪಂಚಾಯಿತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, “ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕ್ಷಯರೋಗ ನಿರ್ಮೂಲನೆಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಸರ್ಕಾರವು ರೋಗಿಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಈ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಬೇಕು” ಎಂದು ಅವರು ಹೇಳಿದರು.
“ಬಡಜನರಿಗೆ ಸಹಾಯ ಮಾಡುವ ಗುರಿಯನ್ನು ಈ ಅಭಿಯಾನ ಹೊಂದಿದೆ. ಯಾವುದೇ ಯೋಜನೆಯನ್ನು ಅದರ ಯಶಸ್ವಿ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾರಿಗೆ ತರಬೇಕು. ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಭಾಗಿಯಾಗಿರುವ ಪ್ರತಿಯೊಬ್ಬರ ವಿಶ್ವಾಸ ಗಳಿಸಲು ಒಟ್ಟಾಗಿ ಕೆಲಸ ಮಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಮನರೇಗಾದ ಎಲ್ಲ ಕಾಮಗಾರಿಗಳು ಮಾರ್ಚ್ ಒಳಗೆ ಮುಕ್ತಾಯಗೊಳ್ಳಬೇಕು: ರಾಹುಲ್ ರತಂ ಪಾಂಡೆ
“ಅಭಿಯಾನದ ಯಶಸ್ಸಿಗೆ ಕಾರ್ಯಪಡೆಯನ್ನು ರಚಿಸಬೇಕಾಗಿದೆ. ಒದಗಿಸಿದ ಮಾರ್ಗಸೂಚಿಗಳ ಆಧಾರದ ಮೇಲೆ, ಕ್ಷಯ(ಟಿಬಿ) ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಪ್ರಯತ್ನ ಮಾಡಬೇಕು. ಕಾರ್ಯಪಡೆಯು ರೋಗಿಗಳನ್ನು ಗುರುತಿಸಿ ಅವರಿಗೆ ಅಗತ್ಯ ಆರೋಗ್ಯ ಸೇವೆಯನ್ನು ಒದಗಿಸುವತ್ತ ಗಮನ ಹರಿಸಬೇಕು. ಈ ಅಭಿಯಾನದ ಜತೆಗೆ, ಆರೋಗ್ಯ ಇಲಾಖೆಯ ಇತರ ಯೋಜನೆಗಳನ್ನೂ ಕೂಡಾ ಸೇರಿಸಬೇಕು. ಮಾನಸಿಕ ಆರೋಗ್ಯ ಮತ್ತು ಒತ್ತಡ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು” ಎಂದು ಸೂಚಿಸಿದರು.