ರಾಜ್ಯದಲ್ಲಿ ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ದಂಧೆಯ ಹಾವಳಿ ಹೆಚ್ಚುತ್ತಿದೆ. ನಗರ ಪ್ರದೇಶಗಳಿಂದ ಗ್ರಾಮೀಣ ಭಾಗಕ್ಕೂ ಹರಡುತ್ತಿದೆ. ಇವುಗಳಿಗೆ ಕಡಿವಾಣ ಹಾಕಲು ಶೀಘ್ರವೇ ಹೊಸ ಮಾನದಂಡಗಳನ್ನು ರೂಪಿಸಲಾಗುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ” ಆನ್ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ಅನ್ನು ತಡೆಯುವ ಕುರಿತು ಸರ್ಕಾರದಲ್ಲಿ ಚರ್ಚೆ ನಡೆದಿದೆ. ಈ ದಂಧೆಗಳನ್ನು ತಡೆಯಲು ಹಲವು ಕಾಯ್ದೆಗಳಿವೆ. ಆದಾಗ್ಯೂ, ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ದಂಧೆಗಳಿಂದ ಜನರನ್ನು ರಕ್ಷಿಸುವ ಬಗ್ಗೆ ಚರ್ಚಿಸುತ್ತಿದ್ದೇವೆ. ಹೊಸ ಮಾನದಂಡಗಳನ್ನು ರೂಪಿಸುತ್ತೇವೆ” ಎಂದು ಹೇಳಿದ್ದಾರೆ.
“ಗೇಮಿಂಗ್ ಆ್ಯಪ್ಗಳಿಗೆ ಕಡಿವಾಣ ಹಾಕುವುದು ರಾಜ್ಯ ಸರ್ಕಾರಕ್ಕೆ ಸವಾಲಿನ ಕೆಲಸ.ಇವುಗಳಿಗೆ ಕಡಿವಾಣ ಹಾಕುವ ಬಗ್ಗೆ ಗೇಮಿಂಗ್ ಇಂಡಸ್ಟ್ರಿ, ಗೃಹ ಇಲಾಖೆ ಹಾಗೂ ಸಾರ್ವಜನಿಕರು ಮತ್ತು ಕಾನೂನು ಇಲಾಖೆಯ ಸಲಹೆ ಪಡೆದು ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ” ಎಂದು ಹೇಳಿದ್ದಾರೆ.