ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಬಿಶಾ ಎಂಬಲ್ಲಿ ಕಾಸರಗೋಡು ಮೂಲದ ಟ್ಯಾಕ್ಸಿ ಚಾಲಕರೊಬ್ಬರನ್ನು ಭಾನುವಾರ ಮುಂಜಾನೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮೃತರನ್ನು ಬಷೀರ್(41) ಎಂದು ಗುರುತಿಸಲಾಗಿದೆ. ಬಷೀರ್ ಅವರು ಪತ್ನಿ, ಇಬ್ಬರು ಮಕ್ಕಳು, ಪೋಷಕರನ್ನು ಅಗಲಿದ್ದಾರೆ. ಬಷೀರ್ ಅವರು ಕಳೆದ 13 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಟ್ಯಾಕ್ಸಿ ಸ್ವಚ್ಛಗೊಳಿಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದ್ದು, ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
