ಪ್ರಯಾಣಿಕರ ದಟ್ಟಣೆಯಿಂದಾಗಿ ರೈಲಿನಿಂದ ಬಿದ್ದು ಐವರು ಸಾನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮಹಾರಾಷ್ಟ್ರದಲ್ಲಿ ಜನರ ಪ್ರತಿನಿತ್ಯದ ಸಂಚಾರಕ್ಕೆ ರೈಲು ಪ್ರಮುಖ ಸಾರಿಗೆ ವ್ಯವಸ್ಥೆಯಾಗಿದೆ. ಪ್ರತಿ ದಿನ ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ.
ಸೋಮವಾರ ಬೆಳಿಗ್ಗೆ ಮುಂಬೈನಲ್ಲಿ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದ ಕಾರಣ ಜನರು ಹೊರಬಿದ್ದಿದ್ದಾರೆ. ಐವರು ಮೃತಪಟ್ಟರೆ ಹಲವು ಮಂದಿ ಗಾಯಗೊಂಡಿದ್ದಾರೆ. ಕೇಂದ್ರ ರೈಲ್ವೆಯ ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ.
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್(CSMT) ಕಡೆಗೆ ಹೋಗುತ್ತಿದ್ದ ಸ್ಥಳೀಯ(ಲೋಕಲ್) ರೈಲಿನಲ್ಲಿ 10ರಿಂದ 12 ಪ್ರಯಾಣಿಕರು ಬೋಗಿಗಳಿಂದ ಹೊರ ಬಿದ್ದಿದ್ದಾರೆ. ರೈಲು ತುಂಬಾ ಜನದಟ್ಟಣೆಯಿಂದ ತುಂಬಿತ್ತು. ಘಟನೆ ಸಂಭವಿಸಿದಾಗ ಪ್ರಯಾಣಿಕರು ಬಾಗಿಲಿನಲ್ಲಿ ನೇತಾಡುತ್ತಿದ್ದರು.