ಭಾರತವು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಿದೆ ಎಂದು ಪ್ರಧಾನಿ ಮೋದಿ ಅವರು ಪದೇಪದೆ ಹೇಳುತ್ತಲೇ ಇದ್ದಾರೆ. ದೇಶ ಆರ್ಥಿಕವಾಗಿ ಎಷ್ಟೇ ಮುಂದುವರೆದರೂ, ರೈತರ ಪಾಡು ಮಾತ್ರ ಶೋಚನೀಯ ಸ್ಥಿತಿಯಲ್ಲೇ ಇದೆ. ತಮ್ಮ ಬೆಳೆಗೆ ಸರಿಯಾದ ಬೆಲೆ ಸಿಗದೆ, ಹಲವಾರು ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊಡಿ ಎಂದು ರೈತರು ಹೋರಾಟ ನಡೆಸುತ್ತಲೇ ಇದ್ದಾರೆ.
ಪ್ರಧಾನಿ ಮೋದಿ ಅವರು 2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ರೈತರ ಆದಾಯವನ್ನು ದ್ವಿಗುಣ ಮಾಡುತ್ತೇವೆ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಸಿ2+50% ಸೂತ್ರದಲ್ಲಿ (ಕೃಷಿ ಮಾಡಲು ವ್ಯಯಿಸಿದ ಎಲ್ಲ ವೆಚ್ಚಗಳು, ಜತೆಗೆ ಕುಟುಂಬದ ಕಾರ್ಮಿಕರ ಶ್ರಮದ ಕೂಲಿ, ಭೂಮಿಯ ಬಾಡಿಗೆ ಮೌಲ್ಯ ಮತ್ತು ಬಂಡವಾಳದ ಮೇಲಿನ ಬಡ್ಡಿ ಹಾಗೂ ಒಟ್ಟು ಖರ್ಚಿನ ಮೇಲೆ 50% ಲಾಭ) ಎಂಎಸ್‌ಪಿ ಜಾರಿ ಮಾಡುತ್ತೇವೆಂದು ರೈತರಿಗೆ ಭರವಸೆ ನೀಡಿದ್ದರು. ಆದರೆ, ಅವರು ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಆದರೆ, ಈವರೆಗೂ ಎಂಎಸ್‌ಪಿ ಜಾರಿಯಾಗಿಲ್ಲ.
ಅಲ್ಲದೆ, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದ ಮೋದಿ, ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದು ರೈತರ ಬದಕನ್ನು ಮತ್ತಷ್ಟು ಅತಂತ್ರ ಮಾಡುವ ಹುನ್ನಾರ ನಡೆಸಿದ್ದರು.
ಅವುಗಳ ರದ್ದತಿಗಾಗಿ ಮತ್ತು ಇದೇ ಎಂಎಸ್‌ಪಿಗಾಗಿ ದೇಶದ ರೈತರು ಅದರಲ್ಲೂ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ರೈತರು ವರ್ಷಾನುಗಟ್ಟಲೆ ದೆಹಲಿ ಗಡಿಯಲ್ಲಿ ಹೋರಾಟ ನಡೆಸಿದರು. 2014ರಲ್ಲಿ ರೈತರಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತೇವೆಂದು ಭರವಸೆ ನೀಡಿದ್ದ ಮೋದಿ ಸರ್ಕಾರ, 2020ರಲ್ಲಿ ಹೋರಾಟನಿರತ ರೈತರ ಮೇಲೆ ದಾಳಿ ನಡೆಸಿತು. ಸರ್ಕಾರದ ದಮನದಿಂದ 750ಕ್ಕೂ ಹೆಚ್ಚು ರೈತರು ಹೋರಾಟದ ಸ್ಥಳದಲ್ಲೇ ಸಾವನ್ನಪ್ಪಿದರು. ಮಾತ್ರವಲ್ಲದೆ, ಕಳೆದ 10 ವರ್ಷಗಳಲ್ಲಿ 4,25,000 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಂಎಸ್‌ಪಿ ವಿಚಾರದಲ್ಲಿ ಮೋದಿ ಸರ್ಕಾರ ರೈತರಿಗೆ ನಂಬಿಕೆ ದ್ರೋಹ ಎಸಗಿದೆ. ಎಂಎಸ್‌ಪಿ ನೀಡಲು ಸಾಧ್ಯವಿಲ್ಲ ಎಂದು ರೈತರ ಮುಖಕ್ಕೆ ಹೊಡೆದಂತೆ ಹೇಳಿದೆ. ಈ ಬಗ್ಗೆ ವಾದಿಸಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಅಲ್ಲದೆ, ಸ್ವಾಮಿನಾಥನ್ ಆಯೋಗದ ವರದಿಯಂತೆ ಸಿ2+50% ಆಧಾರದಲ್ಲಿ ಎಂಎಸ್‌ಪಿ ನೀಡಲಾಗುವುದಿಲ್ಲ. ಬದಲಾಗಿ ‘ಎ2+ಎಫ್‌ಎಲ್’ ಆಧಾರದಲ್ಲಿ ಎಂಎಸ್‌ಪಿ ನೀಡುತ್ತೇವೆಂದು ಹೇಳಿತು. ಆದರೆ, ಅದನ್ನೂ ಜಾರಿಗೆ ತರದೇ, ರೈತರು ಕಂಗಾಲಾಗುವಂತೆ ಮಾಡಿದೆ.
ಸದ್ಯ ಹೆಚ್ಚುತ್ತಿರುವ ಹಣದುಬ್ಬರದ ನಡುವೆ, ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದೆ. ರೈತರು ಕಂಗಾಲಾಗುತ್ತಿದ್ದಾರೆ. ಇದೀಗ, ಮೋದಿ ನೀಡಿದ್ದ ಭರವಸೆಯನ್ನ ನೆನಪಿಸಲು ರೈತರು ಈಗ ಮತ್ತೆ ಹೋರಾಟ ನಡೆಸುತ್ತಿದ್ದಾರೆ.
ಎಂಎಸ್‌ಪಿಗಾಗಿ ದೆಹಲಿಯಲ್ಲಿ ನಡೆದ ಮತ್ತು ಈಗ ನಡೆಯುತ್ತಿರುವ ಹೋರಾಟದ ಬಗ್ಗೆ ಕರ್ನಾಟಕದ ರೈತರ ಅಭಿಪ್ರಾಯವೇನು? ರೈತ ಹೋರಾಟವನ್ನು ರಾಜ್ಯದ ಜನರು ಬೆಂಬಲಿಸುವರೇ? ರೈತರಿಗೆ ಎಂಎಸ್‌ಪಿ ನೀಡುವ ವಿಚಾರದಲ್ಲಿ ಜನರು ಏನು ಹೇಳುತ್ತಾರೆ? ಎಂಬ ವಿಚಾರವನ್ನು ಅರಿಯಲು ಈದಿನ.ಕಾಮ್ ಪ್ರಯತ್ನಿಸಿದೆ.
ಈದಿನ.ಕಾಮ್ ನಡೆಸಿದ ಲೋಕಸಭಾ ಚುನಾವಣೆಯ ಮತದಾನ ಪೂರ್ವ ಸಮೀಕ್ಷೆಯಲ್ಲಿ, “ರೈತರು ತಮ್ಮ ಉತ್ಪನ್ನಗಳಿಗೆ ಎಂಎಸ್‌ಪಿ (ಕನಿಷ್ಠ ಮಾರಾಟ ದರ) ಆಗ್ರಹಿಸಿ ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. MSP ಕೇಳುವ ರೈತರ ಬೇಡಿಕೆಯನ್ನು ನೀವು ಬೆಂಬಲಿಸುತ್ತೀರಾ?” ಎಂದು ಪ್ರಶ್ನಿಸಿತ್ತು.
ಪ್ರಶ್ನೆಗೆ ಉತ್ತರಿಸಿದವರಲ್ಲಿ ಶೇ.69.78ರಷ್ಟು ಜನ ರೈತರಿಗೆ ಎಂಎಸ್‌ಪಿ ನೀಡಬೇಕು. ನಾವು ಅವರ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಇನ್ನು ಶೇ.13.33 ಜನ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ. ಶೇ.16.89ರಷ್ಟು ಜನರು ಗೊತ್ತಿಲ್ಲವೆಂದು ಹೇಳಿದ್ದಾರೆ.
ಇನ್ನು, ಪ್ರತಿಕ್ರಿಯಿಸಿದ ಪುರುಷರಲ್ಲಿ ಶೇ.72.19 ಎಂಎಸ್‌ಪಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನು 13.57% ಜನ ಇಲ್ಲ ಎಂದಿದ್ದರೇ, 14.23% ಜನ ಈ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಹಿಳೆಯರು (66.78%) ಎಂಎಸ್‌ಪಿ ಕೇಳುವ ರೈತರ ಬೇಡಿಕೆಗೆ ನಮ್ಮ ಬೆಂಬಲ ಇದೆ ಎಂದು ತಿಳಿಸಿದ್ದಾರೆ. ಇನ್ನು 13.03% ಮಹಿಳೆಯರು ಬೆಂಬಲ ಸೂಚಿಸಲ್ಲ ಎಂದರೆ, 20.19% ಮಹಿಳೆಯರು ಗೊತ್ತಿಲ್ಲ ಎಂದಿದ್ದಾರೆ.
ರೈತ ಹೋರಾಟ ಮತ್ತು ಎಂಎಸ್‌ಪಿ ಬಗ್ಗೆ ಮಾತನಾಡಿದ ಉದ್ಯೋಗಿಗಳು
ಪ್ರತಿಕ್ರಿಯಿಸಿದವರನ್ನು ಅವರು ಮಾಡುತ್ತಿರುವ ಉದ್ಯೋಗವಾರು ವಿಂಗಡಿಸಿದಾಗ, ‘ಪ್ರತಿ ತಿಂಗಳು 10ರಿಂದ 25 ಸಾವಿರ ರೂ. ನಿಗದಿತ ಸಂಬಳ’ ಇರುವ ಉದ್ಯೋಗಿಗಳು ಹೆಚ್ಚಾಗಿ ರೈತ ಹೋರಾಟವನ್ನು ಬೆಂಬಲಿಸುತ್ತೇವೆ ಎಂದಿದ್ದಾರೆ. 50 ಸಾವಿರ ರೂ. ಮತ್ತು 1 ಲಕ್ಷ ರೂ.ಗಳಿಗೂ ಅಧಿಕ ವೇತನ ಪಡೆಯುತ್ತಿರುವ ಉದ್ಯೋಗಿಗಳು ಹಾಗೂ ತಿಂಗಳಿಗೆ 50 ಸಾವಿರ ರೂ.ಗಳಿಗೂ ಹೆಚ್ಚು ಆದಾಯ ಹೊಂದಿರುವ ಸ್ವ-ಉದ್ಯೋಗಿಗಳಲ್ಲಿ 25%ಗೂ ಅಧಿಕ ಮಂದಿ ರೈತ ಹೋರಾಟಕ್ಕೆ ಬೆಂಬಲ ಇಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ನೋಡಿದಾಗ, ಹೆಚ್ಚಿನ ಉದ್ಯೋಗಿಗಳು ರೈತರ ಪರವಾಗಿದ್ದಾರೆ.
ರೈತ ಹೋರಾಟ ಮತ್ತು ಎಂಎಸ್‌ಪಿ ಬಗ್ಗೆ ಮಾತನಾಡಿದವರ ಶಿಕ್ಷಣದ ಆಧಾರದ ಮೇಲೆ ವರ್ಗೀಕರಣ
ಪ್ರಶ್ನೆಗೆ ಉತ್ತರಿಸಿದವರನ್ನು ಶಿಕ್ಷಣದ ಆಧಾರದ ಮೇಲೆ ವರ್ಗೀಕರಿಸಿದಾಗ, ವಿವಿಧ ಹಂತಗಳವರೆಗೆ ಶಿಕ್ಷಣ ಪಡೆದಿರುವ ಎಲ್ಲರೂ ರೈತರಿಗೆ – ರೈತ ಹೋರಾಟಕ್ಕೆ ತಮ್ಮ ಬೆಂಬಲ ಇದೆ. ತಾವು ಮತದಾನ ಮಾಡುವಾಗ ರೈತರ ಸಮಸ್ಯೆಗಳನ್ನೂ ಪರಿಗಣಿಸುತ್ತೇವೆ ಎಂದಿದ್ದಾರೆ. ರೈತರಿಗೆ ಬೆಂಬಲ ಇಲ್ಲ ಎಂದವರಲ್ಲಿ ಹೆಚ್ಚಿನವರು ಸ್ನಾತಕೋತ್ತರ ಪದವಿ (23%) ಪಡೆದವರಾಗಿದ್ದಾರೆ.
ರೈತರ ಸಮಸ್ಯೆ ಬಗ್ಗೆ ಮಾತನಾಡಿದವರ ವಯಸ್ಸಿನ ಆಧಾರದ ಮೇಲೆ ವರ್ಗೀಕರಣ
ವಯಸ್ಸಿನ ಆಧಾರದಲ್ಲಿ ನೋಡಿದಾಗ, ಎಲ್ಲ ವಯಸ್ಸಿನವರೂ ರೈತರ ಪರವಾಗಿಯೇ ಇದ್ದಾರೆ. ಮತದಾನದ ವೇಳೆ ರೈತರ ಸಮಸ್ಯೆಗಳನ್ನು ಗಂಭೀರಾಗಿ ಪರಗಣಿಸಿ ಮತದಾನ ಮಾಡುತ್ತೇವೆಂದು ಎಲ್ಲರೂ ಹೇಳಿದ್ದಾರೆ.
ಇನ್ನು, ಚುನಾವಣೆಯ ಸಮಯದಲ್ಲಿ ಚರ್ಚೆಯಾಗುತ್ತಿರುವ ಪ್ರಮುಖ ವಿಚಾರಗಳಲ್ಲಿ ರೈತರ ಸಮಸ್ಯೆಗಳೂ ಇವೆ. ದೇಶದ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಜನರು ಕೃಷಿ ಮತ್ತು ಕೃಷಿ ಪೂರಕ ಉದ್ಯೋಗಗಳಲ್ಲಿಯೇ ದುಡಿಯುತ್ತಿದ್ದಾರೆ. ಯಾವುದೇ ಚುನಾವಣೆಯಲ್ಲಿ ಈ ವರ್ಗದ ಜನರ ಮತಗಳು ನಿರ್ಣಾಯಕವಾಗುತ್ತವೆ.ಈ ಬಾರಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡುವ ಮತ್ತು ಎಂಎಸ್‌ಪಿ ಜಾರಿ ಬಗ್ಗೆ ತಮ್ಮ ಪ್ರಣಾಳಿಕೆಯಲ್ಲಿ ಮಾತನಾಡುವ ಪಕ್ಷಕ್ಕೆ ತಮ್ಮ ಮತವೆಂದು ರೈತ ಸಂಘಟನೆಗಳು ಹಾಗೂ ರೈತರು ಘೋಷಿಸಿದ್ದಾರೆ.
ಸದ್ಯಕ್ಕೆ, ಇಂಡಿಯಾ ಮೈತ್ರಿಕೂಟದ ನೇತೃತ್ವ ವಹಿಸಿರುವ ಕಾಂಗ್ರೆಸ್, ತಮ್ಮ ಪ್ರಣಾಳಿಕೆಯಲ್ಲಿ ಎಂಎಸ್‌ಪಿಯನ್ನು ಪ್ರಧಾನ ವಿಚಾರವಾಗಿ ಪರಿಗಣಿಸಿದೆ. ತನ್ನ ಐದು ನ್ಯಾಯ ಗ್ಯಾರಂಟಿಗಳಲ್ಲಿ ಕಿಸಾನ್ ಗ್ಯಾರಂಟಿಯೂ ಒಂದಾಗಿದೆ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಎಂಎಸ್‌ಪಿ ನೀಡುತ್ತೇವೆ. ರೈತರ ಸಾಲ ಮನ್ನಾ ಕುರಿತ ಯೋಜನೆ ರೂಪಿಸಲು ಶಾಶ್ವತ ಆಯೋಗ ರಚಿಸುತ್ತೇವೆ ಎಂದು ಭರವಸೆ ನೀಡಿದೆ.