ಮೋದಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಕಡಿಮೆಯಾಗಲಿದೆ ಎಂದು ಭಾವಿಸಿ ಮತ ಹಾಕಿದ್ದ ಮತದಾರರಿಗೆ ಈ ಹತ್ತು ವರ್ಷಗಳ ಮೋದಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವುದು ನಿರಾಸೆ ಮೂಡಿಸಿದೆ. ಈ ದಿನ.ಕಾಮ್ ನಡೆಸಿದ ಸಮೀಕ್ಷೆಯಲ್ಲಿ ಶೇ. 45.75 ರಷ್ಟು ಮತದಾರರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
2013ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ವಾಚಾಮಗೋಚರವಾಗಿ ಭಾಷಣ ಬಿಗಿಯುತ್ತಾ ಪ್ರವರ್ಧಮಾನಕ್ಕೆ ಬಂದ ನರೇಂದ್ರ ಮೋದಿ ಅವರು 2014ರ ಚುನಾವಣೆಯಲ್ಲಿ ಗೆದ್ದು ಮೊದಲ ಅವಧಿಗೆ ಅಧಿಕಾರದ ಚುನ್ನಾಣಿ ಹಿಡಿದ ನಂತರ ತಾನು ಮಾಡಿರುವ ಭಾಷಣ ಮತ್ತು ಕೊಟ್ಟ ಆಶ್ವಾಸನೆಯನ್ನೇ ಸಂಪೂರ್ಣವಾಗಿ ಮರೆತುಬಿಟ್ಟಿದ್ದರು.
ಅಂದು ಅವರು ಭಾಷಣ ಮಾಡುತ್ತಾ ವಿದೇಶದಲ್ಲಿರುವ ಕಪ್ಪು ಹಣ ವಾಪಸ್ ತರಬೇಕಾ, ಬೇಡ್ವಾ? ಪೆಟ್ರೋಲ್ ದರ ಇಳಿಯಬೇಕಾ, ಬೇಡ್ವಾ? ಭ್ರಷ್ಟಾಚಾರದ ಬೇರು ಕಿತ್ತೊಗೆಯಬೇಕಾ, ಬೇಡ್ವಾ? ಭ್ರಷ್ಟರನ್ನೆಲ್ಲ ಜೈಲಿಗೆ ಕಳಿಸಬೇಕಾ, ಬೇಡ್ವಾ? ಎಂದು ಪ್ರಶ್ನೆ ಕೇಳಿ ಜನರಿಂದ ಎಲ್ಲದಕ್ಕೂ ಬೇಕು ಬೇಕು… ಎಂಬ ಉತ್ತರ ಪಡೆದಿದ್ದರು. ಆದರೆ, ಪ್ರಧಾನಿ ಕುರ್ಚಿಯಲ್ಲಿ ಕೂತ ಮೇಲೆ ಅವರು ಮಾಡಿದ್ದೇ ಉದ್ಯಮಿಗಳ ಸೇವೆ. ಅದಾನಿ ಅಂಬಾನಿಗಳ ಸೇವೆ. ಕಪ್ಪುಹಣ ಭಾರತಕ್ಕೆ ತರೋದು, ವರ್ಷಕ್ಕೆರಡು ಕೋಟಿ ಉದ್ಯೋಗ ಸೃಷ್ಟಿ, ಪೆಟ್ರೋಲ್ ದರ ಇಳಿಸೋದು ಮರೆತೇ ಬಿಟ್ರು.
ಬಹಳ ಮುಖ್ಯವಾದ “ನಾ ಖಾವೂಂಗ ಖಾನೇ ದೂಂಗಾ” ಎಂಬ ತನ್ನ ಜನಪ್ರಿಯ ಘೋಷವಾಕ್ಯ ಮರೆತು ಮೊದಲ ಅವಧಿಯಲ್ಲಿಯೇ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿಬಂದಿತ್ತು. ರಫೇಲ್ ಖರೀದಿ ಸಂಬಂಧ ಮನಮೋಹನ್ ಸಿಂಗ್ ಸರ್ಕಾರ ಫ್ರಾನ್ಸ್ ಸರ್ಕಾರದ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದುಪಡಿಸಿ ಹೊಸ ಒಪ್ಪಂದ ಮಾಡಿಕೊಂಡು ಮೂರು ಪಟ್ಟು ಹೆಚ್ಚು ಹಣ ಕೊಟ್ಟು ₹58,891 ಕೋಟಿ ಬೆಲೆಗೆ 36 ರಫೇಲ್ ಮಲ್ಟಿರೋಲ್ ಯುದ್ಧ ವಿಮಾನಗಳನ್ನು ಖರೀದಿಸಿದೆ. ಈ ಬಗ್ಗೆ ವಿರೋಧ ಪಕ್ಷಗಳು ಸುಪ್ರೀಂ ಮೆಟ್ಟಿಲೇರಿದಾಗ ರಫೆಲ್ ದಾಖಲೆಗಳು ಕಳೆದು ಹೋಗಿವೆ ಎಂದು ಮೋದಿ ಸರ್ಕಾರ ಕೋರ್ಟಿನ ಹಾದಿ ತಪ್ಪಿಸಿತ್ತು. ಆ ಪ್ರಕರಣ ಮುಂದೆ ಹೋಗಲೇ ಇಲ್ಲ.
ಎರಡನೇ ಅವಧಿಯಲ್ಲಿ ಕೊರೊನಾ ಸೋಂಕಿನಿಂದ ದೇಶ ತತ್ತರಿಸುತ್ತಿದ್ದಾಗ ಪಿಎಂ ಕೇರ್ಸ್ ಎಂಬ ನಿಧಿ ಸ್ಥಾಪಿಸಿದ ಪ್ರಧಾನಿ ಮೋದಿ ಸಾವಿರಾರು ಕೋಟಿ ನಿಧಿ ಸಂಗ್ರಹಿಸಿದ್ದರು. ಆದರೆ, ಅದರ ಲೆಕ್ಕ ಕೇಳುವ ಹಕ್ಕು ಈ ದೇಶದ ಜನರಿಗೆ ಇಲ್ಲ. ಯಾಕೆಂದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಾಹಿತಿ ಕೇಳುವಂತಿಲ್ಲ. ಸಿಎಜಿ ವರದಿಯ ವ್ಯಾಪ್ತಿಗೂ ಬರುವುದಿಲ್ಲ. ಅಷ್ಟೇ ಅಲ್ಲ ದೇಶದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ, ಚಿಕಿತ್ಸೆ, ಔಷಧಿಗೆ ತತ್ವಾರ ಬಂದಾಗ ತಟ್ಟೆ ಬಾರಿಸಿ, ದೀಪ ಹಚ್ಚಿ ಎಂದು ಹೇಳಿ ಜನರನ್ನು ಮೂರ್ಖರನ್ನಾಗಿದ್ದರು. ಹೈದರಾಬಾದಿನಲ್ಲಿ ಲಸಿಕೆ ತಯಾರಿಕಾ ಸಂಸ್ಥೆ ಇದ್ದರೂ ಪೂನಾದ ಸೀರಂ ಇನ್‌ಸ್ಟಿಟ್ಯೂಟ್‌ಗೆ ಲಸಿಕೆ ತಯಾರಿಕಾ ಗುತ್ತಿಗೆ ನೀಡಿದ್ದರು. ಅದಕ್ಕಾಗಿ ಈ ಸಂಸ್ಥೆಯಿಂದ ದೇಣಿಗೆ ಪಡೆದಿರುವುದು ಈಗ ಬಹಿರಂಗಗೊಂಡಿದೆ. ಅಷ್ಟೇ ಅಲ್ಲ ದೇಶದ ಜನರಿಗೆ ಲಸಿಕೆ ನೀಡುವ ಮೊದಲೇ ವಿದೇಶಕ್ಕೆ ರಫ್ತು ಮಾಡಿ ತನ್ನ ಇಮೇಜ್ ಹೆಚ್ಚಿಸಿಕೊಂಡಿದ್ದರು.
ಭ್ರಷ್ಟರನ್ನು ಮಟ್ಟ ಹಾಕುವುದಾಗಿ ಪದೇ ಪದೇ ಹೇಳುತ್ತಾ ಎಲ್ಲಾ ರಾಜ್ಯಗಳಲ್ಲಿ ವಿಪಕ್ಷಗಳಲ್ಲಿರುವ ಭ್ರಷ್ಟಚಾರದ ಆರೋಪ, ತನಿಖೆ ಎದುರಿಸುತ್ತಿರುವವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಎಂದರೆ ಭ್ರಷ್ಟರನ್ನು ಶುದ್ಧ ಮಾಡುವ ವಾಷಿಂಗ್ ಮಷಿನ್ ಎಂಬ ಗೇಲಿಗೆ ಒಳಗಾಗಿದ್ದಾರೆ. ಕುಟುಂಬ ರಾಜಕಾರಣವನ್ನು ಟೀಕಿಸುತ್ತಾ ತಮ್ಮದೇ ಪಕ್ಷದ ಮುಖಂಡರ ಕುಟುಂಬದವರಿಗೆ ಟಿಕೆಟ್ ಕೊಟ್ಟು ತಾವೇ ತಮ್ಮ ನಿಲುವನ್ನು ಮೀರಿದ್ದಾರೆ. ಕುಟುಂಬ ರಾಜಕಾರಣವೇ ಉಸಿರಾಗಿರುವ ಕರ್ನಾಟಕದ ದೇವೇಗೌಡ ಕುಟುಂಬ (ಜೆಡಿಎಸ್)ದ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಪಕ್ಷ ಜೆಡಿಯು ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ.
ಇದೀಗ ಚುನಾವಣೆ ಘೋಷಣೆಯಾಗುವ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ ದೇಶದಲ್ಲಿಯೇ ಅತಿ ದೊಡ್ಡ ಭ್ರಷ್ಟಾಚಾರ ಎಂದು ಚುನಾವಣಾ ಬಾಂಡ್ ಯೋಜನೆಯನ್ನು ಬಣ್ಣಿಸಿದೆ. ಅಷ್ಟೇ ಅಲ್ಲ ಮೋದಿ ಸರ್ಕಾರ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿದೆ. ಇದು ಸಂವಿಧಾನ ಬಾಹಿರ ಮತ್ತು ಕಾನೂನು ಬಾಹಿರ ಎಂದು ಹೇಳಿದೆ. ಭ್ರಷ್ಟ ಕಂಪನಿಗಳಿಂದ, ಭ್ರಷ್ಟಾಚಾರದ ಪ್ರಕರಣ ಎದುರಿಸುತ್ತಿರುವವರಿಂದ, ನಷ್ಟದಲ್ಲಿರುವ ಕಂಪನಿಗಳಿಂದ, ಅಷ್ಟೇ ಏಕೆ ಬೀಫ್ ರಫ್ತು ಕಂಪನಿಗಳಿಂದಲೂ ಬಿಜೆಪಿ ಬಾಂಡ್ ಮೂಲಕ ದೇಣಿಗೆ ಪಡೆದಿದೆ ಎಂಬ ಅಂಶ ಈಗ ಬಹಿರಂಗಗೊಂಡಿದೆ.
***
ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದ ಕರ್ನಾಟಕದ ಮತದಾರರು
ಎರಡನೇ ಅವಧಿ ಮುಗಿಸಿ ಮೂರನೇ ಅವಧಿಗೆ ಗೆಲ್ಲುವ ಉತ್ಸಾಹದಲ್ಲಿರುವ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮಟ್ಟ ಹಾಕುವ ತಮ್ಮ ಘೋಷಣೆಯಾದ “ನಾ ಖಾವೂಂಗಾ ಖಾನೇ ದೂಂಗ” ವನ್ನು ಪಾಲಿಸಿದ್ದಾರೆಯೇ? ಕರ್ನಾಟಕದ ಜನರ ಅಭಿಪ್ರಾಯ ಏನು ಎಂದು ತಿಳಿಯುವ ಪ್ರಯತ್ನವನ್ನು ಈ ದಿನ.ಕಾಮ್ ಮಾಡಿದೆ.
ಸಮೀಕ್ಷೆ ನಡೆಸಿದ ʼಈ ದಿನʼ ತಂಡ ಜನರ ಬಳಿ ಹೋಗಿ ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ ಕಡಿಮೆಯಾಗಿದೆಯಾ ಎಂಬ ಪ್ರಶ್ನೆ ಕೇಳಿತ್ತು. ಅದಕ್ಕೆ ಶೇ. 45.75 ರಷ್ಟು ಮತದಾರರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದಿದ್ದಾರೆ. 32.07% ಮತದಾರರು ಕಡಿಮೆಯಾಗಿದೆ ಎಂದಿದ್ದಾರೆ. ಹಾಗೇ ಇದೆ ಎಂದವರು ಶೇ 12.63%. ಏನೂ ಹೇಳದವರ ಪ್ರಮಾಣ 9.56%.
ಹೆಚ್ಚಾಗಿದೆ ಎಂದವರು ಯಾರ್ಯಾರು?
ಭ್ರಷ್ಟಾಚಾರ ಹೆಚ್ಚಿದೆ ಎಂದು 45.75 % ನಿರುದ್ಯೋಗಿಗಳು, 43.54% ತಿಂಗಳ ಆದಾಯ 50 ಸಾವಿರಕ್ಕಿಂತ ಹೆಚ್ಚಿರುವವರು, 45% 25 ಸಾವಿರಕ್ಕಿಂತ ಹೆಚ್ಚು ಆದಾಯ ಇರುವವರು, 49.46% ಮಂದಿ 1ಲಕ್ಷಕ್ಕಿಂತ ಹೆಚ್ಚು ಆದಾಯ ಇರುವವರು, 47% ಕೂಲಿ ಕಾರ್ಮಿಕರು, 10-25ಸಾವಿರ ವೇತನ ಪಡೆಯುವ 40.27% ಮತದಾರರು ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಯಾವ ವಯೋಮಾನ, ಎಷ್ಟು?
70-100 ವಯೋಮಾನದ 61.11% ಮತದಾರರು ಭ್ರಷ್ಟಾಚಾರ ಹೆಚ್ಚಿದೆ ಎಂದರೆ, 55-70 ವಯೋಮಾನದ 33.94%, 45-55 ವಯೋಮಾನದ 39.84%, 25-45 ವಯೋಮಾನದ 41.93%, 25-25 ವಯೋಮಾನದ 41.12%, 18-25 ವಯೋಮಾನದ 25.55% ಮತದಾರರು ಭ್ರಷ್ಟಾಚಾರ ಹೆಚ್ಚಿದೆ ಎಂದು ಹೇಳಿದ್ದಾರೆ.
ನಿಮ್ಮ ಗಮನಕ್ಕೆ, ಈ ಸಮೀಕ್ಷೆ ನಡೆಯುವಾಗ ಚುನಾವಣಾ ಬಾಂಡ್ ಕುರಿತ ಸುಪ್ರೀಂ ಕೋರ್ಟಿನ ತೀರ್ಪು ಬಂದಿರಲಿಲ್ಲ. ಈ ವಿಚಾರ ಜನಕ್ಕೆ ತಿಳಿದಿರಲಿಲ್ಲ. ತಿಳಿದಿದ್ದರೆ ಈ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವವರ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿತ್ತು.
ಭ್ರಷ್ಟಾಚಾರ ಹೆಚ್ಚಾಗಲು ಯಾರು ಕಾರಣ? ಎಂಬ ಪ್ರಶ್ನೆಗೆ ಬಿಜೆಪಿಯೇ ಕಾರಣ ಎಂದು ಶೇ. 23.4 ಮತದಾರರು ಹೇಳಿದ್ದಾರೆ. ಕಾಂಗ್ರೆಸ್ ಕಾರಣ ಎಂದು 21.45% ಮತದಾರರು ಹೇಳಿದರೆ ಜೆಡಿಎಸ್ ಕಾರಣ ಎಂದು 1.56% ಹೇಳಿದ್ದಾರೆ. ಗೊತ್ತಿಲ್ಲ ಎಂದವರು 11.16%
ಈ

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.