ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ 14 ಸಂಸದರ ಪೈಕಿ 10 ಮಂದಿ ಬುಧವಾರ ತಮ್ಮ ಲೋಕಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ನೇತೃತ್ವದಲ್ಲಿ ಸಂಸದರ ನಿಯೋಗ ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಸ್ಪೀಕರ್ ಅವರನ್ನು ಭೇಟಿ ಮಾಡಿದವರಲ್ಲಿ ಕೇಂದ್ರ ಸಚಿವರಾದ ನರೇಂದ್ರ ತೋಮರ್, ಪ್ರಹ್ಲಾದ್ ಪಟೇಲ್ ಹಾಗೂ ಸಂಸದರಾದ ರಿತಿ ಪಾಠಕ್, ರಾಕೇಶ್ ಸಿಂಗ್, ಉದಯ್ ಪ್ರತಾಪ್ ಸಿಂಗ್(ಮಧ್ಯ ಪ್ರದೇಶ). ರಾಜಸ್ಥಾನದಿಂದ, ರಾಜೀನಾಮೆ ಸಲ್ಲಿಸಿದ ಸಂಸದರಲ್ಲಿ ರಾಜ್ಯವರ್ಧನ್ ರಾಥೋಡ್, ಕಿರೋಡಿ ಲಾಲ್ ಮೀನಾ ಮತ್ತು ದಿಯಾ ಕುಮಾರಿ ಸೇರಿದ್ದರೆ, ಅರುಣ್ ಸಾವೊ ಮತ್ತು ಗೋಮತಿ ಸಾಯಿ ಛತ್ತೀಸ್‌ಗಢದ ಸಂಸದರಾಗಿದ್ದರು.
ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನರಸಿಂಗ್‌ಪುರ ಕ್ಷೇತ್ರದಿಂದ ಗೆದ್ದಿರುವ ಬಿಜೆಪಿ ನಾಯಕ ಪ್ರಹ್ಲಾದ್ ಪಟೇಲ್, “ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾದ ನಂತರ ನಾನು ಲೋಕಸಭೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಶೀಘ್ರದಲ್ಲೇ ನಾನು ಕೂಡ ಸಚಿವ ಸಂಪುಟಕ್ಕೆ ರಾಜೀನಾಮೆಯನ್ನು ನೀಡುತ್ತೇನೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಸ ರೊಟ್ಟಿಯನು ಹೆಂಚಿಗೆ ಹಾಕಿದ ಮಿಜೋ ಮತದಾರರು
ವಿಧಾನಸಭೆಗೆ ಆಯ್ಕೆಯಾಗಿರುವ ಉಳಿದ ಇಬ್ಬರು ಬಿಜೆಪಿ ಸಂಸದರಾದ ಬಾಬಾ ಬಾಲಕನಾಥ್ ಮತ್ತು ರೇಣುಕಾ ಸಿಂಗ್ ಇನ್ನೂ ರಾಜೀನಾಮೆಯನ್ನು ಸಲ್ಲಿಸಿಲ್ಲ.
ತೆಲಂಗಾಣದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ನಿಯೋಜಿತ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಉತ್ತಮ್ ಕುಮಾರ್ ರೆಡ್ಡಿ ಕೂಡ ಲೋಕಸಭಾ ಸದಸ್ಯರಾಗಿದ್ದು, 14 ದಿನಗಳೊಳಗೆ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕಿದೆ.
ಛತ್ತೀಸ್‌ಗಢ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದೆ.
ರಾಜಸ್ಥಾನ, ಛತ್ತೀಸ್‌ಗಢ ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ತಮ್ಮ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.